ಮೈಸೂರು

ರಾಜಕಾರಣಿಗಳಲ್ಲಿ ಪ್ರಾಮಾಣಿಕತೆ ಮಾಯವಾಗುತ್ತಿವೆ : ಮಾಜಿ ಸಚಿವ ಹೆಚ್.ಆಂಜನೇಯ ಬೇಸರ

ಮೈಸೂರು,ಸೆ.25:- ಹಿಂದಿನ ರಾಜಕಾರಣಿಗಳು ಯುವಕರಲ್ಲಿ ಸ್ಪೂರ್ತಿ ತುಂಬುತ್ತಿದ್ದರು. ಅವರಲ್ಲಿ ಪ್ರಾಮಾಣಿಕತೆಯಿರುತ್ತಿತ್ತು. ಆದರೆ ಇಂದು ಕಾಲ ಬದಲಾಗಿದೆ ಪ್ರಾಮಾಣಿಕತೆಗಳು ಮಾಯವಾಗುತ್ತಿವೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಬೇಸರ ವ್ಯಕ್ತಪಡಿಸಿದರು.

ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿಂದು ಮೈಸೂರು ವಿಶ್ವವಿದ್ಯಾನಿಲಯ ರಾಜ್ಯಶಾಶ್ತ್ರ ಅಧ್ಯಯನ ವಿಭಾಗ ವತಿಯಿಂದ ‘ಎನ್.ರಾಚಯ್ಯ ಅಧ್ಯಯನ ಪೀಠ’ ಉದ್ಘಾಟನೆ ಹಾಗೂ ‘ಕರ್ನಾಟಕದಲ್ಲಿ ರಾಜಕೀಯ ನಾಯಕತ್ವ’ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಎನ್.ರಾಚಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು. 70ರದಶಕದಲ್ಲಿ ರಾಜಕಾರಣಿಗಳು ಸರಳ, ಸಜ್ಜನಿಕೆಯಿಂದ ಕೂಡಿರುತ್ತಿದ್ದರು. ಜನರು ಅಂದಿನ ರಾಜಕಾರಣಿಗಳು ನೋಡಿದರೆ ಚಪ್ಪಲಿ ಕಳಚಿಟ್ಟು ದೇವರಿಗೆ ನಮಸ್ಕರಿಸಿದ ರೀತಿ ನಮಸ್ಕರಿಸುತ್ತಿದ್ದರು. ಈಗ ಕಾಲ ಬದಲಾಗಿದೆ. ರಾಜಕಾರಣದ ವ್ಯವಸ್ಥೆ ಬದಲಾಗಿದೆ. ಜನ ಕೂಡ ಬದಲಾಗಿದ್ದಾರೆ. ಇಂದಿನ ಯುವಕರು ಹಿಂದಿನ ರಾಜಕಾರಣಿಗಳ ಆದರ್ಶ, ತತ್ವ, ಸಿದ್ಧಾಂತ, ಪ್ರತಿಪಾದಿಸತಕ್ಕ ತತ್ವಸಿದ್ದಾಂತಗಳನ್ನು ಅಳವಡಿಸಿಕೊಳ್ಳಬೇಕು ಎಂದರು. ಮೈಸೂರಿನ ಅಂದಿನ ರಾಜಕಾರಣಿಗಳು ಮಾಡಿದ ಕ್ರಾಂತಿಕಾರಿ ಕಾರ್ಯಕ್ರಮಗಳು ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿದೆ. ಕಳೆದ ಐದು ವರ್ಷ ಆಳ್ವಿಕೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಕೂಡ ಸಮರ್ಥ ಸೇವೆ ಮಾಡಿದರು. ಸಾಮಾಜಿಕ ನ್ಯಾಯ ಒದಗಿಸಿದರು ಎಂದರು.

ದೇವರಾಜ ಅರಸು ಅವರಂತೂ ಬಡವರ ಏಳ್ಗೆಗಾಗಿಯೇ ನಿರಂತರ ಶ್ರಮಿಸಿದರು. ಮಕ್ಕಳಿಗೆ ಸರಿಯಾದ ಆಹಾರ ಸಿಗುತ್ತಿರಲಿಲ್ಲ. ಅಪೌಷ್ಟಿಕತೆಯಿಂದ ಬಳಲುತ್ತಿದ್ದರೆಂದು ಶಿಶುವಿಹಾರ ತೆರೆದರು. ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಹಾಸ್ಟೇಲ್ ವ್ಯವಸ್ಥೆ ಆರಂಭವಾಯಿತು ಎಂದು ವಿವರಿಸಿದರು. ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸಿದರು. ಮೈಸೂರು ಜಿಲ್ಲೆಯ ಜನತೆ ಅವರ ಸಾಧನೆಗಳನ್ನು, ಪರೋಪಕಾರಗಳನ್ನು ಇಂದಿಗೂ ಸ್ಮರಿಸುತ್ತಾರೆ. ಅವರ ಬದ್ಧತೆ, ಕಾರ್ಯತತ್ಪರತೆ, ನಾಡಿಗೆ ನೀಡಿದ ಕೊಡುಗೆ ಎಲ್ಲವನ್ನೂ ಯುವಜನತೆಗೆ ಪರಿಚಯಿಸುವ ಕೆಲಸವಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕಿ ಡಾ.ಎನ್.ಲೋಲಾಕ್ಷಿ ದಿಕ್ಸೂಚಿ ಭಾಷಣ ಮಾಡಿದರು. ಎನ್.ರಾಚಯ್ಯ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಹೆಚ್.ಎಂ.ರಾಜಶೇಖರ್ ವಿಶೇಷ ಉಪನ್ಯಾಸ ನೀಡಿದರು. ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ,ಮಾಜಿ ಸದಸ್ಯ ಸಿ.ರಮೇಶ್, ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಜಿ.ಟಿ.ರಾಮಚಂದ್ರಪ್ಪ, ಕುಲಸಚಿವ ಪ್ರೊ.ಆರ್.ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: