ಪ್ರಮುಖ ಸುದ್ದಿಮೈಸೂರು

ಅಭಿವೃದ್ಧಿಯ ಹೆಸರಿನಲ್ಲಿ ಪಶ್ಚಿಮಘಟ್ಟ ನಾಶ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ : ಪರಿಸರ ತಜ್ಞ ಪ್ರೊ.ಬಿ.ಎಂ ಕುಮಾರಸ್ವಾಮಿ ಎಚ್ಚರಿಕೆ

ಮೈಸೂರು,ಸೆ.25:- ಅಭಿವೃದ್ಧಿಯ ಹೆಸರಿನಲ್ಲಿ ಪಶ್ಚಿಮಘಟ್ಟ ನಾಶ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು  ಖ್ಯಾತ ಪರಿಸರ ತಜ್ಞ ಪ್ರೊ.ಬಿ.ಎಂ ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

ಕಲಾಮಂದಿರದ ಕಿರುರಂಗಮಂದಿರದಲ್ಲಿಂದು ಜನಚೇತನ ಟ್ರಸ್ಟ್ ಮತ್ತು ಸ್ವದೇಶಿ ಜಾಗರಣ ಮಂಚ್ ಕರ್ನಾಟಕ ಸಹಯೋಗದಲ್ಲಿ ನಡೆದ ಪಶ್ಚಿಮ ಘಟ್ಟ ಉಳಿಸಿ ಅಭಿಯಾನ ವಿಚಾರ ಸಂಕಿರಣದಲ್ಲಿ ಮಾಧವ್ ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ವರದಿಗಳ ಕುರಿತು ವಿಷಯ ಮಂಡಿಸಿದರು. ಪಶ್ಚಿಮ ಘಟ್ಟ ಇಲ್ಲದೇ ಇರುವ ಕರ್ನಾಟಕದ ಬಯಲು ಭೂಮಿ, ತೆಲಂಗಾಣ, ಆಂಧ್ರ ಈ ಎಲ್ಲ ರಾಜ್ಯಗಳಲ್ಲಿ ಕೂಡ ಏನು ನದಿಗಳು ಹರಿಯತ್ತೆ, ಕೃಷ್ಣ ಮತ್ತಿತರ ಉಪನದಿಗಳು, ಕಾವೇರಿ ಮತ್ತದರ ಉಪನದಿಗಳು, ತುಂಗಭದ್ರಾ ಮತ್ತದರ ಉಪನದಿಗಳು ಪೂರ್ವಕ್ಕೆ ಹರಿದು ಬಂಗಾಳಕೊಲ್ಲಿಯನ್ನು ಸೇರಿ ಇಢಿ ದಕ್ಷಿಣ ಭಾರತದ ಎಲ್ಲ ರಾಜ್ಯಗಳಿಗೂ ಕೂಡ ಕುಡಿಯುವ ನೀರು, ಕೃಷಿಗೆ ಬೇಕಾದ ನೀರಾವರಿ ಎಲ್ಲವನ್ನೂ ಒದಗಿಸುತ್ತವೆ. ಈ ಅಮೂಲ್ಯವಾದ ನೀರನ್ನು ಒದಗಿಸಿಕೊಟ್ಟಿದ್ದೇ ಪಶ್ಚಿಮ ಘಟ್ಟಗಳು. ನಮಗೆ ಮಳೆಗಾಲ ಆರಂಭವಾದರೆ ಟೈಮಿಗೆ ಸರಿಯಾಗಿ ಮಳೆ ಬರಬೇಕು. ನೀರಾವರಿಗೆ ಏನೂ ತೊಂದರೆ ಆಗಬಾರದು. ಸ್ವಿಚ್ ಹಾಕಿದಾಗ ಲೈಟ್ ಉರಿಯಬೇಕು ಎಂದೆಲ್ಲ ಬಯಸುತ್ತೇವೆ. ಆದರೆ ಇದರ ಮೂಲ ಪಶ್ಚಿಮ ಘಟ್ಟ ಎನ್ನುವುದನ್ನು ಮರೆಯುತ್ತೇವೆ ಎಂದು ಖೇದ ವ್ಯಕ್ತಪಡಿಸಿದರು. ಅರಣ್ಯ ಸಂರಕ್ಷಣೆಯನ್ನು ತಿರಸ್ಕಾರ ಮಾಡಿದರೆ, ಅಭಿವೃದ್ಧಿಯ ಹೆಸರಿನಲ್ಲಿ ನಾಶ ಮಾಡಿದರೆ ತುಂಗಾ,ಭದ್ರಾ, ಕಾಳಿ ಯಾವ ನದಿಗಳೂ ಉಳಿಯಲ್ಲ. ಪಶ್ಚಿಮ ಘಟ್ಟಗಳನ್ನು ಸಂರಕ್ಷಣೆ ಮಾಡಲೇ ಬೇಕು. ಮಾಡದೇ ವಿಧಿಯಿಲ್ಲ. ಪಶ್ಚಿಮಘಟ್ಟ ನಾಶವಾದರೆ ಏನಾಗಲಿದೆ ಎಂಬುದನ್ನು ಕೇರಳ-ಕೊಡಗು ವಿಕೋಪವೇ ತಿಳಿಸಿದೆ. ಇದು ಕೇವಲ ಸ್ಯಾಂಪಲ್ ಅಷ್ಟೇ. ಮನೆಹಾಳು ಅಭಿವೃದ್ಧಿಯನ್ನು ಮುಂದುವರಿಸಿದರೆ ಇದರ ಹತ್ತುಪಟ್ಟು ಪ್ರತಿಕ್ರಿಯೆಯನ್ನು ಪ್ರಕೃತಿ ಕೊಡಲಿದೆ ಎಂದರು.

ಅಭಿವೃದ್ಧಿ ಹೆಸರಿನಲ್ಲಿ ಸಾಕಷ್ಟು ಪಶ್ಚಿಮ ಘಟ್ಟಗಳು ನಶಿಸಿವೆ. 4ಮಾರ್ಚ್ 2010ರಲ್ಲಿ ಉಳಿದಿರುವ ಪಶ್ಚಿಮಘಟ್ಟ ಉಳಿಸಬೇಕು ಎಂದು ಅದರ ಸ್ಥಿತಿಗತಿ ತಿಳಿಯುವ ಸಮಿತಿ ರಚಿಸಿದರು. ಅದಕ್ಕೆ ಮಾಧವ್ ಗಾಡ್ಗೀಳ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದರು. ನಂತರ ಆಗಸ್ಟ್ 2011ರಲ್ಲಿ ಮಾಧವ್ ಗಾಡ್ಗೀಳ್ ಕೇಂದ್ರಕ್ಕೆ ವರದಿ ಕೊಟ್ಟರು. ವಿಚಿತ್ರವೆಂದರೆ ಅವರೇನು ವರದಿ ಕೊಟ್ಟರೆಂದುಭಾರತದ ಬಹುಪಾಲು ಜನರಿಗೆ ತಿಳಿಯುವ ಮೊದಲೆ ಮೈನಿಂಗ್ ಲಾಬಿ, ಟಿಂಬರ್ ಲಾಬಿ, ರಿಯಲ್ ಎಸ್ಟೇಟ್ ಲಾಬಿಗಳಿಗೆ ಗೊತ್ತಾಗಿದೆ. ವರದಿ ಹೊರಬಂದರೆ ಮನೆಹಾಳು ಕೆಲಸಕ್ಕೆ ಜನರೇ ಪ್ರತಿಭಟಿಸುತ್ತಾರೆಂದು ವರದಿ ಬಿಡುಗಡೆಯಾಗಲು ಬಿಡದೆ ಅದನ್ನು ಗರ್ಭಪಾತ ಮಾಡಿಸಿಬಿಟ್ಟರು ಎಂದು ಬೇಸರಿಸಿದರು. ಸೆ.18ಕ್ಕೆ ವರದಿ ಬಗ್ಗೆ ಮಾತನಾಡದೇ ಬಾಯಿ ಮುಚ್ಚಿಕೊಂಡಿರಿ ಎಂದು ಸಂದೇಶ ಕಳುಹಿಸಿದ್ದರಂತೆ. ವರದಿ ಹೊರಗೆ ಬಂದರೆ ದೇಶದ ಭದ್ರತೆಗೆ, ವಿಜ್ಞಾನಕ್ಕೆ ತೊಂದರೆಯಾಗಲಿದೆ ಎಂದರು. ಆದರೆ ವರದಿಯಲ್ಲಿ ದೇಶದ ಭದ್ರತೆಯ, ವಿಜ್ಞಾನದ ಯಾವ ವಿಷಯವೂ ಇರಲಿಲ್ಲ. ಪರಿಸರ ಸಂರಕ್ಷಣೆಗೆ ಹೆಚ್ಚು ಪ್ರಾಶಸ್ತ್ಯ. ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸಮಾನ ಪ್ರಾಶಸ್ತ್ಯ ಈ ರೀತಿಯಾಗಿ ವರದಿಯಲ್ಲಿ ತಿಳಿಸಲಾಗಿತ್ತು. ಮೂರು ಭಾಗಗಳಾಗಿ ಮಾಡಿ ಜಿಲ್ಲೆ, ತಾಲೂಕುಗಳನ್ನು ಆಯ್ಕೆ ಮಾಡಲಾಗಿತ್ತು. ಪಶ್ಚಿಮಘಟ್ಟಗಳಲ್ಲಿ ಕುಲಾಂತರಿ ಬೆಳೆಗಳಿಗೆ ಅವಕಾಶ ನೀಡಬಾರದು.  ಪಾರಂಪರಿಕ ಬೆಳೆಗಳನ್ನು ಬೆಳೆಯಬೇಕು. ವರದಿ ಸ್ವೀಕರಿಸಿದ ಮೂರು ವರ್ಷದೊಳಗೆ ಪ್ಲಾಸ್ಟಿಕ್ ಬ್ಯಾಗ್ ಗಳನ್ನು ನಿಷೇಧಿಸಬೇಕು. ದೇವರಕಾಡನ್ನು, ನಾಗಬನಗಳನ್ನು ಜನ ಉಳಿಸಿಕೊಂಡಿದ್ದಾರೆ. ಅದರಲ್ಲಿ ಕಾಂಪ್ಲೆಕ್ಸ್ ಕಟ್ಟಡಗಳು ತಲೆ ಎತ್ತಬಾರದು. ಸಾರ್ವಜನಿಕ ಭೂಮಿಯಿದ್ದರೆ ಅದನ್ನು ಖಾಸಗಿಯಾಗಿ ಪರಿವರ್ತಿಸಬಾರದು ಎಂದು ವರದಿ ನೀಡಲಾಗಿತ್ತು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಖ್ಯಾತ ಪರಿಸರ ತಜ್ಞ ಡಾ.ಯಲ್ಲಪ್ಪರೆಡ್ಡಿ, ಪರಿಸರವಾದಿ ನಿರ್ಮಲಾ ಗೌಡ, ಜನಚೇತನ ಟ್ರಸ್ಟ್ ಅಧ್ಯಕ್ಷ ಪ್ರಸನ್ನ ಎನ್.ಗೌಡ, ರಾಜ್ಯ ಸಂಯೋಜಕ ಎನ್.ಆರ್.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: