ಪ್ರಮುಖ ಸುದ್ದಿ

ಮಹಾಮಳೆ ಹಾನಿ : ಬುಡಕಟ್ಟು ಜನರ ಸಂಕಷ್ಟಕ್ಕೂ ಸ್ಪಂದಿಸಿ : ಆದಿವಾಸಿಗಳ ಸಮನ್ವಯ ಸಮಿತಿ ಒತ್ತಾಯ

ರಾಜ್ಯ(ಮಡಿಕೇರಿ) ಸೆ.26 :- ಕೊಡಗು ಜಿಲ್ಲೆಯಲ್ಲಿ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಸುರಿದ ಧಾರಾಕಾರ ಮಳೆಗೆ ಸಿಲುಕಿದ ಅನೇಕ ಬುಡಕಟ್ಟು ಕುಟುಂಬಗಳು ಸಂಕಷ್ಟವನ್ನು ಎದುರಿಸುತ್ತಿದ್ದು, ಜಿಲ್ಲಾಡಳಿತ ಸಕಾಲದಲ್ಲಿ ಸ್ಪಂದಿಸುವ ಮೂಲಕ ನೊಂದವರಿಗೆ ಅಗತ್ಯ ಪರಿಹಾರವನ್ನು ನೀಡಬೇಕೆಂದು ಕರ್ನಾಟಕ ಆದಿವಾಸಿಗಳ ಸಮನ್ವಯ ಸಮಿತಿ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಕಾರ್ಯದರ್ಶಿ ವೈ.ಕೆ.ಗಣೇಶ್, ಬುಡಕಟ್ಟು ಜನರು ಅನುಭವಿಸುತ್ತಿರುವ ಕಷ್ಟ, ನಷ್ಟದ ಕುರಿತು ಮಾಹಿತಿ ನೀಡಿದರು. ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಕರಡಿಗೋಡು ಚಿಕ್ಕನಹಳ್ಳಿ ರಾಮ್‍ಪುರ ತೋಟದಲ್ಲಿದ್ದ ಪಣಿ ಎರವರ ಕುಟುಂಬದ 8 ಮನೆಗಳಿಗೆ ನೀರುನುಗ್ಗಿ ಮನೆಯ ಸಾಮಾಗ್ರಿಗಳು, ಮೂಲ ದಾಖಲೆಗಳು, ವಿದ್ಯಾರ್ಥಿಗಳ ಸಮವಸ್ತ್ರ ಹಾಗೂ ಪುಸ್ತಕಗಳು ನೀರು ಪಾಲಾಗಿವೆ. ನಷ್ಟದ ಒಟ್ಟು ಹಾನಿ ಸುಮಾರು 50 ಸಾವಿರ ರೂ. ಗಳಿಗಿಂತ ಅಧಿಕವಾಗಿದೆ.

ತಿತಿಮತಿ ಗ್ರಾ.ಪಂ. ವ್ಯಾಪ್ತಿಯ ಎಡತೊರೆ ಕಾಲೋನಿಯಲ್ಲಿರುವ ಸುಮಾರು 3 ಮನೆಗಳ ಗೋಡೆಗಳು ಮಳೆಯಿಂದ ಬಿರುಕು ಬಿಟ್ಟಿವೆ. ಬೇಟೋಳಿ ಗ್ರಾ.ಪಂ. ವ್ಯಾಪ್ತಿಯ ಪೆರುಂಬಾಡಿಯಲ್ಲಿರುವ ಆದಿವಾಸಿಗಳು ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ಇಲ್ಲಿ ಅಗತ್ಯವಾಗಿ ಶೌಚಾಲಯಗಳು ಮೊದಲು ನಿರ್ಮಾಣಗೊಳ್ಳಬೇಕಾಗಿದೆ ಎಂದು ತಿಳಿಸಿದ ಗಣೇಶ್, ಎಲ್ಲಾ ಸಂತ್ರಸ್ತ ಕುಟುಂಬಗಳಿಗೆ ಜಿಲ್ಲಾಡಳಿತ ಸೂಕ್ತ ರೀತಿಯಲ್ಲಿ ಪರಿಹಾರವನ್ನು ಒದಗಿಸಬೇಕೆಂದು ಒತ್ತಾಯಿಸಿದರು. ಸ್ವಚ್ಛ ಭಾರತದ ಪರಿಕಲ್ಪನೆ ಆದಿವಾಸಿಗಳ ಹಾಡಿಗಳಲ್ಲಿ ಅನುಷ್ಠಾನಗೊಳ್ಳುವುದು ಬೇಡವೆ ಎಂದು ಪ್ರಶ್ನಿಸಿದರು.

ಕೆಲವು ಗ್ರಾ.ಪಂ.ಗಳಲ್ಲಿ ಪರಿಹಾರದ ಸಾಮಾಗ್ರಿ ಮತ್ತು ಕಿಟ್‍ಗಳನ್ನು ವಿತರಿಸುವ ಸಂದರ್ಭ ಪಕ್ಷಭೇದ ಮಾಡಲಾಗಿದೆ. ಅತಿ ಕಡುಬಡತನದಲ್ಲಿರುವ ಬುಡಕಟ್ಟು ಜನರಿಗೆ ಆಹಾರ ಸಾಮಾಗ್ರಿ ಮತ್ತು ಪರಿಹಾರದ ಕಿಟ್ ನೀಡದೆ ವಂಚಿಸಲಾಗಿದೆ. ಸರ್ಕಾರ ಪರಿಹಾರ ನೀಡುವ ಸಂದರ್ಭ ಯಾವುದೇ ನಿರ್ಬಂಧಗಳನ್ನು ಹೇರದಿದ್ದರು ಗ್ರಾ.ಪಂ.ಗಳು ದುರ್ಬಲರಾದ ಬುಡಕಟ್ಟು ಜನರಿಗೆ ಸರ್ಕಾರದ ಸೌಲಭ್ಯವನ್ನು ನೀಡದೆ ವಂಚಿಸಿದ್ದಾರೆ ಎಂದು ಆರೋಪಿಸಿದರು.

ಸ್ತ್ರೀ ಶಕ್ತಿ ಸಂಘ, ಸ್ವಸಹಾಯ ಸಂಘ, ಧರ್ಮಸ್ಥಳ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆ, ಪೈನಾನ್ಸ್ ಗಳಿಂದ ಪಡೆದಿರುವ ಸಾಲವನ್ನು ಮರುಪಾವತಿಸಲು ಸಾಕಷ್ಟು ಕಾಲವಕಾಶ ನೀಡಬೇಕಾಗಿದೆ. ಕನಿಷ್ಟ 6 ತಿಂಗಳವರೆಗೆ ಬಲವಂತದ ಸಾಲ ವಸೂಲಾತಿ ಮಾಡದಂತೆ ಸರಕಾರ ಸೂಚನೆ ನೀಡಬೇಕು. ಗೋಣಿಕೊಪ್ಪದ ಹಾತೂರು ಗ್ರಾಮದ ಸಂಸ್ಥೆಯೊಂದು ಬಲವಂತದ ಸಾಲ ವಸೂಲಾತಿಗೆ ಮುಂದಾಗಿದ್ದು, ಬಡ ಸಾಲಗಾರರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಲಾಗುತ್ತಿದೆ. ಇದರಿಂದ ಸಾಲ ಪಡೆದಿರುವ ಬುಡಕಟ್ಟು ಸಮುದಾಯ ಆತಂಕಗೊಂಡಿದ್ದು, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗಣೇಶ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ  ಶ್ರೀಮಂಗಲ ಹೋಬಳಿ ಕೆ.ಬಾಡಗ ಗ್ರಾಮದ ಪಿ.ಎಂ.ತಮ್ಮು , ಕರಡಿಗೋಡು ಗ್ರಾಮದ ನಿವಾಸಿ ಕಾಕು, ಕುಟ್ಟಂದಿಯ ಲಲಿತ ಹಾಗೂ ತಿತಿಮತಿಯ ಅಶೋಕ ಉಪಸ್ಥಿತರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: