ಕರ್ನಾಟಕಪ್ರಮುಖ ಸುದ್ದಿ

ವಿಧಾನ ಪರಿಷತ್ ಚುನಾವಣೆ: ಅವಿರೋಧವಾಗಿ ಆಯ್ಕೆಯಾಗುವ ಸದಸ್ಯರಿವರು

ಬೆಂಗಳೂರು (ಸೆ.26): ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ 3 ಸದಸ್ಯರನ್ನು ಆಯ್ಕೆ ಮಾಡಲು ಅ.3ರಂದು ಚುನಾವಣೆ ನಿಗದಿಯಾಗಿತ್ತು. ಆದರೀಗ ಎಲ್ಲ ಅಭ್ಯರ್ಥಿಗಳೂ ಅವಿರೋಧವಾಗಿ ಆಯ್ಕೆಯಾಗಲಿರುವ ಕಾರಣ ಸೆ.27ರಂದು ಇವರುಗಳ ಆಯ್ಕೆಯ ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆ.

ಪಕ್ಷೇತರ ಅಭ್ಯರ್ಥಿಯಾಗಿ ಟಿ.ಆರ್.ಹರಿಶ್ಚಂದ್ರ ಗೌಡ ಮತ್ತು ವೆಂಕಟೇಶ್ವರ ಮಹಾಸ್ವಾಮೀಜಿ ಕಟಕದೊಂಡ ಅವರು ಸಲ್ಲಿಸಿದ್ದ ನಾಮಪತ್ರ ತಿರಸ್ಕಾರವಾಗಿರುವ ಕಾರಣ, ಕಣದಲ್ಲಿ ಕಾಂಗ್ರೆಸ್‌ನ ಇಬ್ಬರು ಮತ್ತು ಜೆಡಿಎಸ್‌ನ ಒಬ್ಬ ಅಭ್ಯರ್ಥಿ ಮಾತ್ರ ಉಳಿದುಕೊಂಡಿದ್ದಾರೆ.

ಹೀಗಾಗಿ ಅವಿರೋಧ ಆಯ್ಕೆ ನಡೆಯಲಿದೆ. ಸೆ.27 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದು, ಅಂದು ಚುನಾವನಾಧಿಕಾರಿ ಎಂ.ಎಸ್.ಕುಮಾರಸ್ವಾಮಿ ಅವರು ಅವಿರೋಧ ಆಯ್ಕೆ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಕೆ.ಎಸ್.ಈಶ್ವರಪ್ಪ, ವಿ.ಸೋಮಣ್ಣ ಮತ್ತು ಡಾ.ಜಿ.ಪರಮೇಶ್ವರ ಅವರು ಜಯಗಳಿಸಿದ್ದರು.

ನಜೀರ್ ಅಹ್ಮದ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. 2ನೇ ಬಾರಿಗೆ ಅವರು ಪರಿಷತ್ ಸದ್ಯರಾಗುತ್ತಿದ್ದಾರೆ.  1983, 1999 ಮತ್ತು 2013ರ ಚುನಾವಣೆಯಲ್ಲಿ ನಜೀರ್ ಅಹ್ಮದ್ ಅವರು ಕೋಲಾರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಒಂದೂವರೆ ವರ್ಷ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದರು.

ಸವಿತಾ ಸಮಾಜದ ಮುಖಂಡ ಎಂ.ಸಿ.ವೇಣುಗೋಪಾಲ್ ಅವರು ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದ 2ನೇ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದ್ದಾರೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ಆಪ್ತರು ವೇಣುಗೋಪಾಲ್. ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರಾಗಿದ್ದರು. 2013ರ ವಿಧಾನಸಭೆ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. 2018ರ ಚುನಾವಣೆಯಲ್ಲಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಮಾಜಿ ಸಚಿವ ರಾಮಲಿಂಗಾರೆಡ್ಡಿಯವರ ಪುತ್ರಿ ಸೌಮ್ಯಾ ರೆಡ್ಡಿ ಅವರಿಗೆ ಈ ಕ್ಷೇತ್ರ ಬಿಟ್ಟುಕೊಟ್ಟಿದ್ದರು.

ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಎಚ್.ಎಂ.ರಮೇಶ್ ಗೌಡ ನಾಮಪತ್ರ ಸಲ್ಲಿಸಿದ್ದಾರೆ. ಬೆಂಗಳೂರು ನಗರ ಜೆಡಿಎಸ್ ಯುವ ಘಟಕದ ಅಧ್ಯಕ್ಷರು ಇವರು. ಉದ್ಯಮಿಯೂ ಆಗಿರುವ ಇವರು ಹೆಣ್ಣೂರಿನಲ್ಲಿ ಎಚ್.ಎಂ.ಇಂಟರ್ ನ್ಯಾಷನಲ್ ಶಾಲೆ ನಡೆಸುತ್ತಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಆದರೆ ರಾಜ್ಯ ಪ್ರತಿಪಕ್ಷ ಬಿಜೆಪಿ ವಿಧಾನ ಪರಿಷತ್ ಚುನಾವಣೆಯಿಂದ ದೂರವುಳಿದಿದೆ. ಅಭ್ಯರ್ಥಿಗಳನ್ನು ಪಕ್ಷ ಕಣಕ್ಕಿಳಿಸಿಲ್ಲ. ಚುನಾವಣೆಯಲ್ಲಿ ಅಭ್ಯರ್ಥಿ ಜಯಗಳಿಸಲು 112 ಮತಗಳ ಅಗತ್ಯ ವಿತ್ತು. ಆದರೆ, ವಿಧಾನಸಭೆಯಲ್ಲಿ ಪಕ್ಷ 104 ಸ್ಥಾನಗಳನ್ನು ಹೊಂದಿದೆ. ಮತಗಳ ಕೊರತೆ ಹಿನ್ನಲೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. (ಎನ್.ಬಿ)

Leave a Reply

comments

Related Articles

error: