ಮೈಸೂರು

ಜಾಂಬೂರಿ ಉತ್ಸವ ಉದ್ಘಾಟನೆಗಾಗಿ ಡಿ.29ರಂದು ಮೈಸೂರಿಗೆ ರಾಷ್ಟ್ರಪತಿ

ಉತ್ತಮ ನಾಳೆಗಾಗಿ ನಾವೆಲ್ಲರೂ ಜೊತೆಯಾಗಿರೋಣ ಎನ್ನುವ ಸದಾಶಯದೊಂದಿಗೆ ಮೈಸೂರು ನಂಜನಗೂಡು ರಸ್ತೆಯಲ್ಲಿರುವ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ವಿ.ಪಿ. ದೀನದಯಾಳು ನಾಯ್ಡು ನಗರದಲ್ಲಿ ಡಿ.29ರಂದು 17ನೇ ರಾಷ್ಟ್ರೀಯ ಜಾಂಬೂರಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸ್ಕೌಟ್ಸ್ ಆ್ಯಂಡ್ ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯ ತಿಳಿಸಿದರು.

ನಾಯ್ಡುನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಿ.29ರಂದು ಮಧ್ಯಾಹ್ನ 3 ಗಂಟೆಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ರಾಜ್ಯಪಾಲ ವಜೂಬಾಯಿ ರೂಢಾಬಾಯಿ ವಾಲಾ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತರಿರುತ್ತಾರೆ ಎಂದು ತಿಳಿಸಿದರು.

ದೇಶದ ಎಲ್ಲಾ ರಾಜ್ಯಗಳಿಂದ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಸುಮಾರು 25 ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ. ಇದು 17ನೇ ಜಾಂಬೂರಿ ಉತ್ಸವವವಾಗಿದ್ದು ಇಲ್ಲಿಯವರೆಗೆ ಮೂರು ಉತ್ಸವಕ್ಕೆ ಕರ್ನಾಟಕ ಆತಿಥ್ಯ ನೀಡಿದೆ. ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ನಡೆಯಲಿದೆ.

ದೇಶದ ಎಲ್ಲಾ ಭಾಗಗಳಿಂದ ಆಗಮಿಸುವ ಸ್ಕೌಟ್ಸ್ ಮತ್ತು ಗೈಡ್ಸ್ ನ ವಿದ್ಯಾರ್ಥಿ ಸಮುದಾಯ ಹಾಗೂ ತರಬೇತುದಾರರಿಗೆ ಅವಶ್ಯಕವಾದ ಮೂಲಭೂತ ಸೌಕರ್ಯಗಳನ್ನು ಸೃಷ್ಟಿಸಲು ಅನೇಕ ಸಮಿತಿಗಳನ್ನು ರಚಿಸಲಾಗಿದೆ. ಆಹಾರ ಪೂರೈಕೆ, ವಸತಿ, ಆರೋಗ್ಯ, ಭದ್ರತೆ, ನೀರು ಮತ್ತು ವಿದ್ಯುತ್ ಪೂರೈಕೆ, ಸಾರಿಗೆ ಸಂಪರ್ಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಕುರಿತಂತೆ ಸಮಿತಿಗಳನ್ನು ರಚಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ವೆಂಕಟೇಶ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್’ನ ಜಿಲ್ಲಾ ಮುಖ್ಯ ಆಯುಕ್ತ ವಿಶ್ವನಾಥ, ಪ್ರಚಾರ ಮಾಧ್ಯಮ ಸಮಿತಿಯ ಎಂ.ಎ. ಚೆಲ್ಲಯ್ಯ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: