ಮೈಸೂರು

ಪ್ರವಾಸೋದ್ಯಮ -ಡಿಜಿಟಲ್ ಪರಿವರ್ತನೆ ಬಗ್ಗೆ ರಾಷ್ಟ್ರೀಯ ವಿಚಾರ ಸಂಕಿರಣ

ಮೈಸೂರು, ಸೆ. 26 ನಗರದ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು ಪ್ರವಾಸೋದ್ಯಮ ಮತ್ತು ಹೊಟೇಲ್ ನಿರ್ವಹಣೆ ವಿಭಾಗ ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆ ಸಂಯುಕ್ತಾಶ್ರಯದಲ್ಲಿ ಅ. 5 ಮತ್ತು 6 ರಂದು ಕೆ.ಆರ್.ಎಸ್. ರಸ್ತೆ ಮೇಟಗಳ್ಳಿಯಲ್ಲಿನ ಕಾಲೇಜಿನ ಪ್ರವಾಸೋದ್ಯಮ ಸಭಾಂಗಣದಲ್ಲಿ ಪ್ರವಾಸೋದ್ಯಮ ಮತ್ತು ಡಿಜಿಟಲ್ ಪರಿವರ್ತನೆ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ.
ಈ ಕುರಿತಂತೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾಹಿತಿ ನೀಡಿದ ಕಾಲೇಜು ವಿಭಾಗದ ಎಚ್.ಎನ್. ಸತೀಶ್, ಅಂದು ಬೆಳಗ್ಗೆ 9.30ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಸಚಿವರಾದ ಸಾ.ರಾ. ಮಹೇಶ್ ಮತ್ತು ಜಿ.ಟಿ. ದೇವೇಗೌಡ ಮೊದಲಾದವರು ಅತಿಥಿಗಳಾಗಿರುವರು.
ಪ್ರವಾಸೋದ್ಯಮದಲ್ಲಿ ಡಿಜಿಟಲ್ ತಂತ್ರಜ್ಞಾನದ ಹೊಸ ಆಯಾಮ ಮತ್ತು ಸವಾಲು ಕುರಿತಂತೆ ಚರ್ಚೆ ನಡೆಯಲಿದ್ದು, ದೇಶದ ವಿವಿಧ ವಿವಿಗಳ ಹಲವಾರು ಸಂಪನ್ಮೂಲ ವ್ಯಕ್ತಿಗಳು, ವಿದ್ಯಾರ್ಥಿಗಳು ಹಾಗೂ ಪ್ರವಾಸೋದ್ಯಮ ಪರಿಣಿತರು ಪಾಲ್ಗೊಳ್ಳಲಿದ್ದಾರೆ.
ಪ್ರವಾಸೋದ್ಯಮ ಹಾಗೂ ಹೊಟೇಲ್ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿದ್ದು, ಅದಕ್ಕೆ ಸಂಬಂಧಿಸಿದ ಶಿಕ್ಷಣ ಪಡೆದವರಿಗೆ ನಿರುದ್ಯೋಗ ಎಂಬ ಮಾತೇ ಸಾಮಾನ್ಯವಾಗಿ ಅನ್ವಯಿಸದೆಂದರು.
ಜೊತೆಗೆ, ತಮ್ಮ ಕಾಲೇಜಿನ ಈ ವಿಭಾಗ ಅತ್ಯುನ್ನತ ಹಾಗೂ ನವೀನ ಸೌಲಭ್ಯ ಹೊಂದಿದ್ದು, ಶುಲ್ಕ ಸಹಾ ಇಡೀ ರಾಜ್ಯದಲ್ಲಿಯೇ ಅತಿ ಕಡಿಮೆಯದಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕೆಂದರು.
ಶಿಕ್ಷಣ ಸಂಸ್ಥೆ ಅಧ್ಯಕ್ಷ ಆರ್. ವಾಸುದೇವಮೂರ್ತಿ, ಡಾ. ವಿಜಯಲಕ್ಷ್ಮಿ ಭಾಗವತ್, ಡಾ.ಸಿ.ಕೆ. ರೇಣಕಾರ್ಯ, ಇತರರು ಇದ್ದರು.

Leave a Reply

comments

Related Articles

error: