
ಮೈಸೂರು
ಮಾಚಿದೇವರ ಜಯಂತ್ಯುತ್ಸವ ಹಾಗೂ ಸಾಮೂಹಿಕ ವಿವಾಹ ಫೆ.1ರಂದು
ಮಾಚಿದೇವರ ಜಯಂತ್ಯುತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಮಡಿವಾಳರ ಸಂಘದಿಂದ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಾಧ್ಯಕ್ಷ ಸಿ.ನಂಜಪ್ಪ ಸೋಮವಾರ ಪತ್ರಕರ್ತರ ಭವನಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆ.1ರಂದು ಬುಧವಾರ ಬೆಳಗ್ಗೆ 10 ಗಂಟೆಗೆ ನಗರದ ಜೆ.ಕೆ.ಮೈದಾನದಲ್ಲಿ ಜಯಂತ್ಯುತ್ಸವ ಹಾಗೂ 101 ಜೋಡಿ ಸಾಮೂಹಿಕ ವಿವಾಹವನ್ನು ಏರ್ಪಡಿಸಲಾಗಿದ್ದು ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಆಗಮಿಸುವರು ಎಂದರು.
ಕಳೆದ ಬಾರಿ ಕೂಡಲ ಸಂಗಮದಲ್ಲಿ ನಡೆದ ಜಯಂತ್ಯುತ್ಸವದಲ್ಲಿ 1 ಲಕ್ಷ ಸಮಾಜ ಬಾಂಧವರು ಪಾಲ್ಗೊಂಡಿದ್ದು ಈ ಹಿನ್ನೆಲೆಯಲ್ಲಿ ಈ ಬಾರಿಯೂ ಅಷ್ಟೇ ಪ್ರಮಾಣದಲ್ಲಿ ಸಮಾಜದವರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅಲ್ಲದೆ, ಸಾಮೂಹಿಕ ವಿವಾಹದಲ್ಲಿ ಮದುವೆಯಾಗುವವರು ಕಡ್ಡಾಯವಾಗಿ ದೃಢೀಕರಣ ಪತ್ರವನ್ನು ತರಬೇಕು ಎಂದರು.
ನಮ್ಮ ನಡೆ ದೆಹಲಿ ಕಡೆಗೆ (ದೆಹಲಿ ಚಲೋ): ಮೂರು ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಮಾರ್ಚ್ 10ರಂದು ನಮ್ಮ ನಡೆ ದೆಹಲಿ ಕಡೆಗೆ ಜಾಥವನ್ನು ಹಮ್ಮಿಕೊಳ್ಳಲಾಗಿದ್ದು, ರಾಮ್ ಲೀಲಾ ಮೈದಾನದಲ್ಲಿ ಬೃಹತ್ ಮಡಿವಾಳರ ಜಾಗೃತ ಸಮಾವೇಶ ನಡೆಯಲಿದೆ. ಈಗಾಗಲೇ ಮುಂಗಡವಾಗಿ ರೈಲನ್ನು ಕಾದಿರಿಸಲಾಗಿದ್ದು ಮಾರ್ಚ್ 7ರಂದು ಮಧ್ಯಾಹ್ನ 1ಗಂಟೆಗೆ ಮೈಸೂರು ನಿಲ್ದಾಣದಿಂದ ರೈಲು ದೆಹಲಿಗೆ ಪಯಣ ಬೆಳಸಲಿದೆ. ಸಂಸದ ಪ್ರತಾಪ್ ಸಿಂಹ ಹಸಿರು ನಿಶಾನೆ ತೋರುವರು. ಅಂದು ಸಮಾಜದ ಬಾಂಧವರು ಒಗ್ಗಟ್ಟಿನ ಬಲ ಪ್ರದರ್ಶನವನ್ನು ಮಾಡಿ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಗುವುದು.
ಬೇಡಿಕೆಗಳು: ಅನ್ನಪೂರ್ಣಮ್ಮ ವರದಿಯಂತೆ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು. ರಜೆ ಘೋಷಣೆಯಿಲ್ಲದೆ, ಪ್ರತಿ ವರ್ಷ ಫೆ.1ರಂದು ಮಾಚಿ ದೇವರ ಜಯಂತಿಯನ್ನು ಸರ್ಕಾರದ ಮಟ್ಟದಲ್ಲಿ ನಡೆಸಬೇಕು ಹಾಗೂ ಸಮಾಜದ ನಿಗಮ ಮಂಡಳಿಯನ್ನು ಸ್ಥಾಪಿಸಿಬೇಕೆಂದು ಸಮಾವೇಶದಲ್ಲಿ ಆಗ್ರಹಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ರವಿನಂದನ್, ಪ್ರಧಾನ ಕಾರ್ಯದರ್ಶಿ ಬಿ.ರಂಗಸ್ವಾಮಯ್ಯ, ಖಜಾಂಚಿ ಸುಬ್ರಹ್ಮಣ್ಯ ಗಿರಿಧರ್ ಜಿ. ರವಿಶಂಕರ್ ಭೈರಿ ಉಪಸ್ಥಿತರಿದ್ದರು.