ಮೈಸೂರು

ಕಮಲಾ ಕರಿಕಾಳನ್ ಸರ್ವಾಧಿಕಾರಿ ಧೋರಣೆಗೆ ಖಂಡನೆ: ಜಿಲ್ಲಾ ಸಚಿವರ ಮನೆ ಮುಂದೆ ಧರಣಿಯ ಎಚ್ಚರಿಕೆ

ಮೈಸೂರು ಚಾಮರಾಜೇಂದ್ರ ಮೃಗಾಲಯದ ನಿರ್ದೇಶಕಿ ಕಮಲಾ ಕರಿಕಾಳನ್ ಅವರು ಪ್ರಾಥಮಿಕ ತನಿಖೆಯಿಲ್ಲದೆ, ಕಾನೂನು ಬಾಹಿರವಾಗಿ ದಲಿತ ನೌಕರರನ್ನು ಅಮಾನತುಗೊಳಿಸಿ ಸರ್ವಾಧಿಕಾರಿ ಧೋರಣೆ ಮೆರೆಯುತ್ತಿದ್ದು  ಸರ್ಕಾರವೂ ಅವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕೆಂದು ಮೈಸೂರು ವಿಭಾಗದ ಪರಿಶಿಷ್ಟ ಜಾತಿ-ವರ್ಗಗಳ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಅನುದಾನಿತ ಸಂಸ್ಥೆ ನೌಕರರ ಪರಿಷತ್ ಗೌರವಾಧ್ಯಕ್ಷ ಶಾಂತರಾಜ್ ಆಗ್ರಹಿಸಿದರು.

ಅವರು, ಸೋಮವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವಿರೇಶ್ ಅವರು ಅಮಾನತು ಹಿಂಪಡೆಯುವ ಭರವಸೆ ನೀಡಿದ್ದರಿಂದ ಅಮರಣಾಂತರ ಉಪವಾಸವನ್ನು ಮೊಟಕುಗೊಳಿಸಿದ್ದರು. ಆದರೆ, ನೌಕರರ ಅಮಾನತು ಇಂದಿಗೂ ರದ್ದಾಗಿಲ್ಲ, ಈ ಬಗ್ಗೆ ಚರ್ಚಿಸಲು ಮಲ್ಲಿಗೆ ವಿರೇಶ್ ಫೋನ್ ತೆಗೆಯುತ್ತಿಲ್ಲ ಎಂದು ದೂರಿದರು.

indexಮೇಯರ್ ಸಮ್ಮುಖದಲ್ಲಿ ನಡೆದ ಆಡಳಿತಾಧಿಕಾರಿ ಸಭೆಯಿಂದ ಕಮಲಾ ಕರಿಕಾಳನ್ ಅರ್ಧದಿಂದಲೇ ಹೊರನಡೆದು ದುರಂಹಕಾರ ಮೆರೆದಿದ್ದಾರೆ. ಅಧಿಕಾರಿಯ ಬೇಜವಾಬ್ದಾರಿ ನಡೆಯಿಂದ ಸಮಸ್ಯೆ ಬಗೆಹರಿಯುವ ಬದಲು ಮತ್ತಷ್ಟು ಜಟಿಲವಾಗಿದೆ. ನೌಕರರ ಮನವಿಗೆ ಅಧಿಕಾರಿ ಸೂಕ್ತ ರೀತಿಯಲ್ಲಿ ಸ್ಪಂದಿಸದೆ ಶಾಂತಿಯುತವಾಗಿ ಬಗೆಹರಿಯುವ ವಿಷಯಕ್ಕೆ ಹೋರಾಟದ ರೂಪ ನೀಡುತ್ತಿದ್ದಾರೆ ಎಂದು ಕಮಲಾ ಕರಿಕಾಳನ್ ವಿರುದ್ಧ ಹರಿಹಾಯ್ದರು.

ಸಮಾವೇಶಗಳಲ್ಲಿ ವೇದಿಕೆಗಳ ಮೇಲೆ ದಲಿತರ ಅಭಿವೃದ್ಧಿಯ ಬಗ್ಗೆ ಉದ್ದುದ್ದ ಭಾಷಣ ಮಾಡುವ ಜನಪ್ರತಿನಿಧಿಗಳು ಇದೀಗ ಅವರಿಗೆ ತೊಂದರೆಯಾಗುತ್ತಿದ್ದರೂ ನಿರ್ಲಕ್ಷ್ಯವಹಿಸಿದ್ದಾರೆ. ಅಮಾನತಾದ ನೌಕರರ ಬದುಕು ತೀವ್ರ ಸಂಕಷ್ಟಕ್ಕೀಡಾಗಿದೆ. ಇನ್ನೆರಡು ದಿನಗಳಲ್ಲಿ ಸರ್ಕಾರವೂ ಸೂಕ್ತ ಕ್ರಮ ಜರುಗಿಸದೆ ಹೋದರೆ ನೌಕರರ ಸಂಘಟನೆಯಿಂದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪನವರ ಮನೆ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಚಿಕ್ಕಅನ್ನದಾನಿ, ರಾಜರತ್ನ ಹಾಗೂ ಇತರರು ಇದ್ದರು.

Leave a Reply

comments

Related Articles

error: