ಕರ್ನಾಟಕಮೈಸೂರು

ಗೊಡ್ಡು ಸಂಪ್ರದಾಯಗಳಿಗೆ ಸೆಡ್ಡು ಹೊಡೆದ ಮದುವೆ

ಮಾನವೀಯತೆಯ ಮುಂದೆ ಏನೂ ಇಲ್ಲ. ಮಾನವೀಯತೆಯು ಪ್ರೇಮ, ದೇಶ, ಜಾತಿ ಬಣ್ಣ, ಧರ್ಮ ಎಲ್ಲವನ್ನೂ ಮೀರಿ ನಿಲ್ಲುತ್ತದೆ. ಸಾಮಾಜಿಕ ಗೊಡ್ಡು ಸಂಪ್ರದಾಯಗಳಿಗೆ ಸೆಡ್ಡು ಹೊಡೆದಿದೆ ಇಲ್ಲೊಂದು ಕುಟುಂಬ. ಬೆಂಗಳೂರಿನ ಪೀಣ್ಯ ನಿವಾಸಿ, ಅರ್ಕೇಶ್ವರ ದೇವಳದ ಅರ್ಚಕ ಕಿರಣ್ ಗೋಪಿ ಮೈಸೂರಿನ ವಿಜಯನಗರದ ಸ್ತ್ರೀ ಸೇವಾದಲ್ಲಿರುವ ಕಾಜೋಲ್ ಎಂಬವರನ್ನು ವರಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

12 ವರ್ಷದ ಕೆಳಗೆ ಕಾಜೋಲ್ 8 ವರ್ಷದವಳಿರುವಾಗ ಮೈಸೂರು ರೈಲ್ವೆ ನಿಲ್ದಾಣದಲ್ಲಿ ಪೊಲೀಸರಿಗೆ ಸಿಕ್ಕಿದ್ದಳು. ಉತ್ತರ ಭಾರತದ ಹೆಣ್ಣು ಮಗಳಾಗಿದ್ದು, ಈಕೆಯನ್ನು ಬಾಲಕಿಯರ ಬಾಲಮಂದಿರದಲ್ಲಿ ಸೇರಿಸಲಾಗಿತ್ತು. ಇದೀಗ ಸ್ತ್ರೀ ಸೇವಾನಿಕೇತನದಲ್ಲಿ ಆಶ್ರಯ ಪಡೆದಿದ್ದಳು. ಆಕೆ ಪ್ರಥಮ ಪಿಯುಸಿ ಮುಗಿಸಿದ್ದು, ಉನ್ನತ ಶಿಕ್ಷಣದಲ್ಲಿ ಒಲವು ಹೊಂದಿಲ್ಲದ ಕಾರಣ ಶಿಕ್ಷಣ ಮೊಟಕುಗೊಳಿಸಿದ್ದಳು. ಕುವೆಂಪು ಅವರ ಮಂತ್ರ ಮಾಂಗಲ್ಯ ಬೋಧಿಸುವ ಮೂಲಕ ವಿವಾಹ ನೆರವೇರಿತು.

ಕಿರಣ್ ತಂದೆ ರಾಜಶೇಖರ್ ಬೆಂಗಳೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ತನ್ನ ಮಗನ ಮದುವೆಗಾಗಿ ಕನ್ಯೆ ಹುಡುಕಲು ಅರ್ಜಿಸಲ್ಲಿಸಿದ್ದರು. ಇಲಾಖೆಯು ಕಿರಣ್ ಕುರಿತು ಮಾಹಿತಿ ಸಂಗ್ರಹಿಸಿ ಸ್ತ್ರೀಸೇವಾನಿಕೇತನದಲ್ಲಿರುವ  ಕಾಜೋಲ್ ಳನ್ನು ಸೂಚಿಸಿದರು. ಇಬ್ಬರೂ ಪರಸ್ಪರ ವಿವಾಹಕ್ಕೆ ಒಪ್ಪಿಗೆ ನೀಡಿದ್ದು, ಇವರ ವಿವಾಹವು ಸರಳವಾಗಿ ವಿಜಯನಗರದ ಸ್ತ್ರೀಶಕ್ತಿ ಸಭಾಂಗಣದಲ್ಲಿ ಕುಟುಂಬದ ಸದಸ್ಯರು, ಅಧಿಕಾರಿಗಳು, ಹಿರಿಯರ ಸಮ್ಮುಖದಲ್ಲಿ ನಡೆಯಿತು. ನಗರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋಂದಣಿಯಾಯಿತು.

ಶಾಸಕ ವಾಸು, ಮ.ನ.ಪಾ. ಸದಸ್ಯ ಮಹದೇವಪ್ಪ, ಜಿಲ್ಲಾಪಂಚಾಯತ್ ಉಪಾಧ್ಯಕ್ಷ ನಟರಾಜ, ಜಿಲ್ಲಾಧಿಕಾರಿ ಡಿ.ರಣದೀಪ್, ಜಿಪಂ ಸಿಇಒ ಶಿವಶಂಕರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರಾಧ, ವಿಶ್ರಾಂತ ಪ್ರಾಧ್ಯಾಪಕಿ ಎಚ್.ಜೆ. ಸರಸ್ವತಿ ಸೇರಿದಂತೆ ಹಲವರು ಈ ವಿವಾಹಕ್ಕೆ ಸಾಕ್ಷಿಯಾದರು.

Leave a Reply

comments

Related Articles

error: