ಮೈಸೂರು

ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಗೆ ಭೂಗೋಳಶಾಸ್ತ್ರ ಬೇಕು : ಪ್ರೊ.ಕೆ.ಭೈರಪ್ಪ

ಮೈಸೂರು ವಿವಿ ಯ ಭೂಗೋಳ ಶಾಸ್ತ್ರ ವಿಭಾಗ ಮತ್ತು ಭಾರತೀಯ ಭೂಗೋಳಶಾಸ್ತ್ರಜ್ಞರ ರಾಷ್ಟ್ರೀಯ ಸಂಘದ ವತಿಯಿಂದ ಮಾನಸಗಂಗೋತ್ರಿಯ ಸೆನೆಟ್ ಭವನದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಸೋಮವಾರ ‘ಸುಸ್ಥಿರ ಅಭಿವೃದ್ಧಿ, ಪ್ರಾಕೃತಿಕ ದುರ್ಬಲತೆ, ಭೌಗೋಳಿಕ ತಂತ್ರಜ್ಞಾನ’ ಕುರಿತಾದ 3 ದಿನಗಳ 38ನೇ ಭಾರತೀಯ ಭೌಗೋಳಿಕ ಕಾಂಗ್ರೆಸ್ ಸಮಾವೇಶವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ಮಂಗಳೂರು ವಿವಿ ಯ ಕುಲಪತಿ ಪ್ರೊ.ಕೆ.ಭೈರಪ್ಪ, ಗುಲ್ಬರ್ಗಾ ವಿವಿ ಯ ಕುಲಪತಿ ಎಸ್. ಆರ್. ನಿರಂಜನ್, ಮೈಸೂರು ವಿವಿ ಯ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ, ಅಲಹಾಬಾದ್ ವಿವಿ ಯ ಮಾಜಿ ಕುಲಪತಿ ಪ್ರೊ.ಆರ್.ಪಿ. ಮಿಶ್ರಾ, ಭಾರತೀಯ ಭೂಗೋಳಶಾಸ್ತ್ರಜ್ಞರ ರಾಷ್ಟ್ರೀಯ ಸಂಘದ ಅಧ್ಯಕ್ಷ ವಿ.ಕೆ. ಶ್ರೀವಾಸ್ತವ ಉದ್ಘಾಟಿಸಿದರು.

ನಂತರ ಮಾತನಾಡಿದ ಮಂಗಳೂರು ವಿವಿಯ ಕುಲಪತಿ ಪ್ರೊ.ಕೆ.ಭೈರಪ್ಪ, ಭೂಗೋಳಶಾಸ್ತ್ರವು ಆಧುನಿಕ ವಿಜ್ಞಾನಕ್ಕೆ ಹೆಚ್ಚು ಸಂಬಂಧಪಟ್ಟ ವಿಷಯವಾಗಿದೆ. ಆಧುನಿಕ ಭೂಗೋಳಶಾಸ್ತ್ರವು ಏರಿಯಲ್ ಫೋಟೋಗ್ರಫಿ, ರಿಮೋಟ್ ಸೈನ್ಸ್, ಜಿ.ಐ.ಎಸ್, ಜಿ.ಪಿಎಸ್,  ಇನ್ನೂ ಮೊದಲಾದ ಹೊಸ ಹೊಸ ವಿಷಯಗಳು ಮತ್ತು ತಂತ್ರಜ್ಞಾನಗಳನ್ನು ಒಳಗೊಂಡಿದೆ. ಇವುಗಳು ಸುಸ್ಥಿರ ಮಾನವ ಅಭಿವೃದ್ದಿಗೆ ಸಹಕಾರಿಯಾಗಿವೆ. ಭೂಗೋಳಶಾಸ್ತ್ರವು ವಿಜ್ಞಾನ, ಸಮಾಜ ವಿಜ್ಞಾನ, ಅರ್ಥಶಾಸ್ತ್ರ, ಮಾನವಿಕ ವಿಷಯಗಳು, ಭೌತಶಾಸ್ತ್ರ, ರಸಾಯನಶಾಸ್ತ್ರ ವಿಷಯಗಳನ್ನು ಆವರಿಸಿದೆ. ಇಂದು ಭೌಗೋಳಿಕ ವಿದ್ಯಾರ್ಥಿಯು ಯಾವುದೇ ಕ್ಷೇತ್ರದಲ್ಲಿ ಬೇಕಾದರೂ ವೃತ್ತಿ ಮಾಡಬಹುದಾಗಿದೆ. ಕೃಷಿಯಲ್ಲೂ ಸಹ ಭೂಗೋಳ ಶಾಸ್ತ್ರ ತನ್ನದೇ ಆದ ಪಾತ್ರ ವಹಿಸುತ್ತದೆ. ದಿನನಿತ್ಯ ಜೀವನದಲ್ಲಿ ಹೆಚ್ಚು ಸಹಕಾರಿಯಾಗಿದೆ. ನಗರ ಅಭಿವೃದ್ದಿ, ಸುಸ್ಥಿರ ಅಭಿವೃದ್ಧಿ, ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಗೆ ಭೂಗೋಳಶಾಸ್ತ್ರ ಬೇಕು ಎಂದು ಹೇಳಿದರು.

ಗುಲ್ಬರ್ಗಾ ವಿವಿಯ ಕುಲಸಚಿವ ಎಸ್. ಆರ್. ನಿರಂಜನ್ ಮಾತನಾಡಿ, ಇಂದು ಹವಾಮಾನ ಬದಲಾವಣೆಯು ಸಂಸ್ಕೃತಿಯ ಮೇಲೆ ನೇರ ಪರಿಣಾಮ ಬೀರುತ್ತಿದೆ. ಹವಾಮಾನ ಬದಲಾವಣೆಯ ಬಗ್ಗೆ ಎಲ್ಲರೂ ಯೋಚಿಸಬೇಕಾಗಿದೆ.  ಸುಸ್ಥಿರ ಅಭಿವೃದ್ದಿ ಎಂಬ ಪದವನ್ನು ನಾವು ದಿನನಿತ್ಯ ಎಲ್ಲಾ ಕ್ಷೇತ್ರಗಳಲ್ಲಿ ಬಳಸುತ್ತಿದ್ದೇವೆ. ಕೃಷಿ ಅಭಿವೃದ್ದಿಯಲ್ಲೂ ಸಹ ಬಳಸುತ್ತೇವೆ. ಇಂದಿನ ವಿಜ್ಞಾನಿಗಳಿಗೆ ಸಾಕಷ್ಟು ಅವಕಾಶಗಳಿವೆ. ನಮ್ಮ ಮುಂದಿರುವ ಆರ್ಥಿಕ, ರಾಜಕೀಯ ಸವಾಲುಗಳನ್ನು ಎದುರಿಸಬೇಕಾಗಿದೆ. ನಿರಂತರ ಮರ ಕಡಿಯುವಿಕೆ, ಕಾಡಿನ ನಾಶ, ನಗರೀಕರಣದಿಂದಾಗಿ ಕೃಷಿ ಭೂಮಿ ಕಡಿಮೆಯಾಗುತ್ತಿದೆ. ಅಲ್ಲದೇ ಮಾಲಿನ್ಯ ಮುಕ್ತ ಪರಿಸರವನ್ನು ನಿರ್ಮಾಣ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು. ಅಲಹಾಬಾದ್ ವಿವಿಯ ಮಾಜಿ ಕುಲಸಚಿವ ಪ್ರೊ. ಆರ್. ಪಿ.ಮಿಶ್ರಾ ಮಾತನಾಡಿ ನಾವು ಇಂದು ಆರ್ಥಿಕವಾಗಿ, ಸಾಮಾಜಿಕವಾಗಿಯೂ ಅಭಿವೃದ್ದಿಯಾಗಬೇಕು. ಗ್ರಾಮಗಳ ಪ್ರಗತಿಯಾಗಬೇಕು. ಕೃಷಿ ಅಭಿವೃದ್ಧಿಯಾದರೆ ಉತ್ಪನ್ನಗಳ ಬೆಳೆಯುವಿಕೆಯು ಸಹ ಹೆಚ್ಚಾಗುತ್ತದೆ. ಆದರೆ ಇಂದು ಅರಣ್ಯ ಭೂಮಿಯನ್ನು ಬೇರೆ ಕೆಲಸಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇಂದಿನ ಜನರ ಮನಸ್ಥಿತಿ ಹೇಗಿದೆ ಎಂದರೆ ಸ್ಮಾರ್ಟ್ ಸಿಟಿ ಬೇಕು. ಆದರೆ ಸ್ಮಾರ್ಟ್ ವಿಲೇಜ್ ಬೇಡ ಎನ್ನುವ ಮಟ್ಟಕ್ಕೆ ಬಂದು ತಲುಪಿದ್ದಾರೆ. ಪ್ರತಿದಿನ ನಡೆಯುತ್ತಿರುವ ಕಳ್ಳತನ ದರೋಡೆ, ಕೊಲೆ ಪ್ರಕರಣಗಳಿಂದಾಗಿ ಅಸುರಕ್ಷಿತ ವಾತಾವರಣ ನಿರ್ಮಾಣವಾಗುತ್ತಿದೆ. ಆರ್ಥಿಕ ಅಭಿವೃದ್ದಿ ಸಾಧಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ NAGI ಯ ಚುನಾಯಿತ ಅಧ್ಯಕ್ಷ ಪ್ರೊ. ಆರ್.ಬಿ.ಪಿ. ಸಿಂಗ್, ಕಾರ್ಯದರ್ಶಿ ಎಸ್.ಸಿ.ರೈ, ಡಾ.ಹೆಚ್.ನಾಗರಾಜ್, ಡಾ.ಆಸೀಮಾ ನಶ್ರತ್ ಮತ್ತಿತರ ಗಣ್ಯರು ಹಾಜರಿದ್ದರು.

Leave a Reply

comments

Related Articles

error: