ಮೈಸೂರು

ವಿದ್ಯಾರ್ಥಿಗಳು ದಿಕ್ಕು ತಪ್ಪಬಾರದು: ಸಚಿವ ಸಿ.ಎಸ್.ಪುಟ್ಟರಾಜು

ಮೈಸೂರು,ಸೆ.28-ವಿದ್ಯಾರ್ಥಿಗಳು ದಿಕ್ಕು ತಪ್ಪದೆ ಸಾಧನೆ ಮಾಡುವ ನಿಟ್ಟಿನಲ್ಲಿ ಶ್ರಮವಹಿಸಬೇಕು ಎಂದು ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

ನಗರದ ವಿದ್ಯಾವರ್ಧಕ ಪ್ರಥಮದರ್ಜೆ ಕಾಲೇಜಿನ 40ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಆಯೋಜಿಸಿದ್ದ ಅಂತರಕಾಲೇಜು ಚರ್ಚಾ ಸ್ಪರ್ಧೆ, ಭಾವಗೀತೆ ಗಾಯನ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರ ಅಭಿವೃದ್ಧಿ ಪಥದಲ್ಲಿ ವಿಶ್ವಮಟ್ಟದಲ್ಲಿ ದಾಪುಗಾಲು ಹಾಕುತ್ತಿದೆ. ಅದಕ್ಕೆ ಕಾರಣ ಯುವ ಪೀಳಿಗೆ. ಆದರೆ ಇತ್ತೀಚೆಗೆ ಯುವ ಸಮೂಹ ದಿಕ್ಕು ತಪ್ಪುತ್ತಿರುವ ಅನೇಕ ಸನ್ನಿವೇಶಗಳನ್ನು ನೋಡುತ್ತಿದ್ದೇವೆ. ಪ್ರತಿಯೊಬ್ಬ ವ್ಯಕ್ತಿ ಸನ್ಮಾರ್ಗದಲ್ಲಿ ನಡೆಯಬೇಕು. ಗುರಿಯನ್ನು ಮುಟ್ಟಲು ಸಾಕಷ್ಟು ಅಡೆ ತಡೆಗಳು ಬರುತ್ತವೆ. ಅದನ್ನು ಎದುರಿಸಿ ಸನ್ಮಾರ್ಗದಲ್ಲಿ ನಡೆದಾಗ ಮಾತ್ರ ರಾಷ್ಟ್ರದ ಸತ್ಪ್ರಜೆಯಾಗಿ ಹೊರಹೊಮ್ಮಲು ಸಾಧ್ಯ ಎಂದರು.

ವಿದ್ಯಾರ್ಥಿ ಜೀವನ ಪುನಃ ಸಿಗುವುದಿಲ್ಲ. ಹೀಗಾಗಿ ವಿದ್ಯಾರ್ಥಿ ಜೀವನದಲ್ಲೇ ಬದುಕು ರೂಪಿಸಿಕೊಳ್ಳಲು ಶ್ರಮವಹಿಸಬೇಕು. ತಂದೆ-ತಾಯಿಗೆ, ಗುರುಗಳಿಗೆ, ವಿದ್ಯಾಸಂಸ್ಥೆಗೆ ಹೆಸರು ತರುವ ಕೆಲಸ ಮಾಡಬೇಕು ಎಂದು ಹೇಳಿದರು.

ವಿದ್ಯಾವರ್ಧಕ ಸಂಘ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ವಿದ್ಯಾವಂತರನ್ನಾಗಿ ಮಾಡುತ್ತಾ ಬಂದಿದೆ. ಇಲ್ಲಿ ಶಿಕ್ಷಣ ಪಡೆದವರು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಟ ಕೆ.ಸುಚೇಂದ್ರ ಪ್ರಸಾದ್, ಗುಂಡಪ್ಪ ಗೌಡ, ಪಿ.ವಿಶ್ವನಾಥ್, ಎಸ್.ಎನ್.ಲಕ್ಷ್ಮೀನಾರಾಯಣ, ಟಿ.ನಾಗರಾಜು ಇತರರು ಉಪಸ್ಥಿತರಿದ್ದರು. (ಎಚ್.ಎನ್, ಎಂ.ಎನ್)

Leave a Reply

comments

Related Articles

error: