ಮೈಸೂರು

ಮೈಸೂರು ದಸರಾ ವಸ್ತುಪ್ರದರ್ಶನ ಮಳಿಗೆ ನಿರ್ಮಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಭಾರೀ ಹಣ ಬಿಡುಗಡೆ : ಆಕ್ರೋಶ

ಮೈಸೂರು,ಸೆ.29:- ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಇತಿಹಾಸ ಪ್ರಸಿದ್ಧ ಮೈಸೂರು ದಸರಾ ವಸ್ತುಪ್ರದರ್ಶನ ಮಳಿಗೆ ನಿರ್ಮಿಸಲು 1 ಕೋಟಿ 50 ಲಕ್ಷ ರೂ. ಬಿಡುಗಡೆ ಮಾಡಿರುವುದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಈ ಮಳಿಗೆಯನ್ನು ನಿರ್ಮಿಸಲು ಈ ಬಾರಿ ಇಷ್ಟೊಂದು ಮೊತ್ತವನ್ನು ಬಿಡುಗಡೆ ಮಾಡಿರುವುದು ಅನುಮಾನಕ್ಕೆ ಎಡೆ ಮಾಡಿದೆ ಯಾಕೆಂದರೆ ಮಳಿಗೆ ನಿರ್ಮಿಸಲು  ಕೇವಲ 30 ರಿಂದ 40 ಲಕ್ಷ ರೂ. ವೆಚ್ಚ ತಗಲುತ್ತಿತ್ತು ಎನ್ನಲಾಗಿದೆ.

ಇದೆ ಮೊದಲ ಬಾರಿಗೆ ಒಂದು ಮಳಿಗೆಗೆ ಭಾರಿ ಮೊತ್ತದ ಹಣ ಬಿಡುಗಡೆ ಮಾಡಿದ್ದು, ಇದರ ಹಿಂದೆ ಭಾರೀ ಭ್ರಷ್ಟಾಚಾರದ ಗುಮಾನಿಗಳೆದ್ದಿದೆ. ತುಕ್ಕು ಹಿಡಿದಿರುವ ಕಬ್ಬಿಣವನ್ನು ಈ ಮಳಿಗೆಗೆ ಉಪಯೋಗಿಸಿರುವುದು ಕಂಡು ಬಂದಿದ್ದು, ಹಳೇ ಕಬ್ಬಿಣಗಳಿಗೆ ಬಣ್ಣ ಬಳಿದು ಹಾಕಲಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವೆಡೆ ನೆರೆ, ಕೆಲವೆಡೆ ಬರ. ಕೊಡಗು ಪ್ರವಾಹದಿಂದ ಅಲ್ಲಿನ ಜನರು ಮನೆ-ಮಠಗಳನ್ನು ಕಳೆದುಕೊಂಡು ಸಂತ್ರಸ್ಥರಾಗಿದ್ದಾರೆ. ಸರ್ಕಾರ ಅಂಥಹವರ ನೆರವಿಗೆ ಬಾರದೆ ಈ ರೀತಿಯ ದುಂದುವೆಚ್ಚ ಮಾಡಿರುವುದು  ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಈ ಹಿಂದೆ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಳಸಿದ್ದ ಕಬ್ಬಿಣಗಳನ್ನೇ ಈ ಮಳಿಗೆ ನಿರ್ಮಿಸಲು ಬಳಕೆ ಮಾಡಲಾಗಿದ್ದು, ಸರ್ಕಾರ ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: