ಮೈಸೂರು

ಹಿಂದಿ ಭಾಷೆಗೆ ನಮ್ಮ ಅವಶ್ಯಕತೆಯಿಲ್ಲ, ನಮಗೆ ಹಿಂದಿ ಭಾಷೆಯ ಅಗತ್ಯವಿದೆ : ಡಾ.ಮಂಜುನಾಥ್ ಎನ್ ಅಂಬಿಗ

ಮೈಸೂರು,ಸೆ.29:- ಹಿಂದಿ ಭಾಷೆಗೆ ನಮ್ಮ ಅವಶ್ಯಕತೆಯಿಲ್ಲ. ಆದರೆ ನಮಗೆ ಹಿಂದಿ ಭಾಷೆಯ ಅಗತ್ಯವಿದೆ ಎಂದು ಎರ್ನಾಕುಳಂ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ್ ಎನ್ ಅಂಬಿಗ ತಿಳಿಸಿದರು.

ಮೈಸೂರು ಮಹಾರಾಜ ಕಾಲೇಜಿನ ಜೂನಿಯರ್ ಬಿ.ಎ.ಹಾಲ್ ನಲ್ಲಿಂದು ಮೈಸೂರು ವಿಶ್ವವಿದ್ಯಾನಿಲಯ, ಮಹಾರಾಜ ಕಾಲೇಜು ಮೈಸೂರು ಹಿಂದಿ ವಿಭಾಗದಿಂದ ಆಯೋಜಿಸಲಾದ ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಹಿಂದಿ ಭಾಷೆಗೆ ಬಹಳಷ್ಟು ಶಕ್ತಿಯಿದೆ. ಅದನ್ನು ಕಲಿಯುತ್ತ ಕಲಿಸುತ್ತ ನನ್ನದಾಗಿಸಿಕೊಂಡೆ. ಇಂದು ನನ್ನನ್ನು ಮಂಜುನಾಥ್ ಎಂದು ಗುರುತಿಸುತ್ತಿಲ್ಲ. ಹಿಂದಿ ಭಾಷೆಯಿಂದಲೇ ಗುರುತಿಸುತ್ತಾರೆ ಎಂದರು. ಹಿಂದಿ ಭಾಷೆಯು ಅಜ್ಞಾನದಿಂದ ಆರಂಭವಾಗಿ ವ್ಯಕ್ತಿಯನ್ನು ಜ್ಞಾನಿಯಾಗಿಸುತ್ತದೆ. ಹಿಂದಿ ಭಾಷೆಗೆ ಆ ಶಕ್ತಿಯಿದೆ. ಅದನ್ನು ಅನುಭವಿಸಬೇಕು. ಅರ್ಥಮಾಡಿಕೊಳ್ಳಬೇಕು. ದೇಶದ ಭಾಷೆಯಾದ ಹಿಂದಿಗೆ ಗೌರವ ನೀಡಬೇಕು. ನಮ್ಮ ಮಾತೃಭಾಷೆಗಳು ಬೇರೆ,ಬೇರೆ ಇರಬಹುದು. ಆದರೆ ದೇಶದ ಮಾತೃಭಾಷೆ ಹಿಂದಿ. ದೇಶವಾಸಿಗಳು ಹಿಂದಿಯನ್ನು ದ್ವೇಷಿಸಿದರು. ವಿದೇಶಿಯರು ಗುರುತಿಸಿದರು. ಮನೆಯಲ್ಲಿರುವ ಹಿರಿಯರನ್ನು ನಾವು ಯಾವ ರೀತಿ ಪೂಜ್ಯಭಾವನೆಯಿಂದ ಗೌರವಿಸುತ್ತೇವೆಯೋ ಅದೇ ರೀತಿ ಹಿಂದಿ ಭಾಷೆಯನ್ನೂ ಕೂಡ ಗೌರವಿಸಬೇಕು ಎಂದು ತಿಳಿಸಿದರು. ಹಿಂದಿ ಭಾಷೆ ಎಲ್ಲರೂ ಪ್ರೀತಿಸುವ ಭಾಷೆ. ಇದು ದೇಶದ ಹೆಮ್ಮೆ. ಭಾರತದ ಗುರುತು. ಎಲ್ಲರಿಗೂ ಇದರ ಮೇಲೆ ಭಾವನೆಯಿದೆ. ತನ್ನದೇ ಆದ ಪರಿಚಯವಿದೆ. ಹಿಂದಿ ಭಾಷೆಗೆ ನಮ್ಮ ಅವಶ್ಯಕತೆಯಿಲ್ಲ. ಆದರೆ ನಮಗೆ ಹಿಂದಿ ಭಾಷೆಯ ಅಗತ್ಯವಿದೆ. ಯಾಕೆಂದರೆ ಅದು ವ್ಯಾವಹಾರಿಕ ಭಾಷೆ. ಹಿಂದಿ ಕಲಿತರೆ ಭಾರತದ ಯಾವ ಮೂಲೆಗೆ ಬೇಕಾದರೂ ಸಂಚರಿಸಬಹುದು. ಪ್ರೇಮದಿಂದ ಕಲಿಸಿದರೆ ಎಲ್ಲರೂ ಕಲಿಯುತ್ತಾರೆ. ಹಿಂದಿ ಭಾಷಾ ಪ್ರೇಮವನ್ನು ಬೆಳೆಸಿಕೊಳ್ಳಬೇಕು. ಬಹುತೇಕ ಎಲ್ಲರ ಮನೆಗಳಲ್ಲೂ ಹಿಂದಿ ಧಾರವಾಹಿಗಳನ್ನು ನೋಡುತ್ತಾರೆ. ಹಿಂದಿ ಭಾಷೆಗೆ ಆಕರ್ಷಿಸುವ ಶಕ್ತಿಯಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಹಾರಾಜ ಕಾಲೇಜಿನ ಆಡಳಿತಾಧಿಕಾರಿ ಪ್ರೊ.ಅನಿಟಾ ಬ್ರಾಗ್ಸ್, ಪ್ರಾಂಶುಪಾಲರಾದ ಪ್ರೊ.ಸಿ.ಪಿ.ಸುನಿತಾ, ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ.ಬಸವರಾಜ ಕೆ.ಬಾರಕೇರ ಮತ್ತಿತರರು ಉಪಸ್ಥಿತರಿದ್ದರು.

ಇದೇ ವೇಳೆ ಲೇಖಕ, ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ.ಬಸವರಾಜ ಕೆ.ಬಾರಕೇರ ರಚಿತ  ‘ಗದ್ಯ ಪ್ರತಿಭಾ’, ‘ಇಂಟರ್ ನೆಟ್ ಕೆ ದೌರ್ ಮೇ ಹಿಂದಿ’ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: