ಮೈಸೂರು

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್.ಎಂ.ವಿ.ಸ್ಮರಿಸುತ್ತಿಲ್ಲ : ಡಾ.ಎಸ್.ಎಲ್.ಭೈರಪ್ಪ ವಿಷಾದ

ಸರ್ ಎಂ.ವಿಶ್ವೇಶ್ವರಯ್ಯ ಆಡಳಿತದಲ್ಲಿ ಮಾತೃಭಾಷೆ ಜಾರಿಗೊಳಿಸುವ ಕನಸು ಕಂಡು ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಗೆ ಪ್ರೇರಣೆಯಾಗಿದ್ದರು. ಆದರೆ ಇಂದು ಸಾಹಿತ್ಯ ಸಮ್ಮೇಳನದಲ್ಲಿ ಪರಿಷತ್ ಕಾರ್ಯಕ್ರಮಗಳಲ್ಲಿ ಅವರನ್ನು ನೆನಪು ಮಾಡಿಕೊಳ್ಳುತ್ತಿಲ್ಲ ಎಂದು ಸಾಹಿತಿ ಹಾಮಾನಾ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಸ್.ಎಲ್.ಭೈರಪ್ಪ ವಿಷಾದ ವ್ಯಕ್ತಪಡಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಡಾ.ಹಾ.ಮಾ.ನಾಯಕ ಪ್ರತಿಷ್ಠಾನವು ಹಾಮಾನಾ ಸ್ಮರಣಾರ್ಥ ಏರ್ಪಡಿಸಿದ್ದ ಸರ್. ಎಂ.ವಿ. ಅವರ ಪ್ರಸ್ತುತತೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಎಸ್.ಎಲ್.ಭೈರಪ್ಪ ಮಾತನಾಡಿದರು.

ಸರ್ಕಾರದ ಆಡಳಿತದಲ್ಲಿ ಉನ್ನತ ಹುದ್ದೆಗೇರಲು ಪದವಿ ಮುಖ್ಯ. ಮೈಸೂರು ಸಂಸ್ಥಾನದಲ್ಲಿ ವಿಶ್ವವಿದ್ಯಾನಿಲಯ ಸ್ಥಾಪನೆ ಆಗಬೇಕು ಎಂದು ಸರ್ ಎಂ.ವಿ.ಕನಸು ಕಂಡಿದ್ದು ಮಾತ್ರವಲ್ಲದೇ, ನಾಲ್ವಡಿ ಕೃಷ್ಣರಾಜ ಒಡೆಯರ್ ಮೂಲಕ ಅದನ್ನು ನನಸು ಮಾಡಿಯೂ ಬಿಟ್ಟರು. ಆದರೆ ಮೈಸೂರು ವಿವಿ ಮತ್ತು ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಗೆ ಕಾರಣರಾದ ಸರ್. ಎಂ.ವಿ. ಅವರ ಸ್ಮರಣೆಗೆ ಪುತ್ಥಳಿ ಸ್ಥಾಪಿಸದಿರುವುದು ದುರದೃಷ್ಟಕರ ಎಂದರು.

ಸಮರ್ಥರಾದವರಿಗೆ ಅಧಿಕಾರ ಸಿಗಲಿ ಎಂದು ಆಶಿಸಿದ್ದರೇ ಹೊರತು ಸರ್.ಎಂ.ವಿ.ಎಂದಿಗೂ ಮೀಸಲಾತಿ ವಿರೋಧಿಯಾಗಿರಲಿಲ್ಲ. ಮೀಸಲಾತಿ ವಿರೋಧಿಯಾಗಿದ್ದರು ಎಂಬ ನೆಪವೊಡ್ಡಿ ಅವರ ಪ್ರತಿಮೆ ಸ್ಥಾಪನೆ ಆಗದಂತೆ ತಡೆದಿರುವುದು ವಿಷಾದನೀಯ ಎಂದರು.

ಸರ್.ಎಂ.ವಿ ಪ್ರಸ್ತುತತೆ ಕುರಿತು ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ಸಂಶೋಧಕ ಡಾ.ಡಿ.ಎಸ್.ಜಯಪ್ಪ ಗೌಡ ಉಪನ್ಯಾಸ ನೀಡಿದರು.

ಈ ಸಂದರ್ಭ ಪ್ರತಿಷ್ಠಾನದ ಕಾರ್ಯದರ್ಶಿ ಪಿ.ವೆಂಕಟರಾಮಯ್ಯ, ಖಜಾಂಚಿ ಕೆ.ಮಹದೇವ್ ಮತ್ತಿತರರು ಉಪಸ್ಥಿತರಿದ್ದರು

 

Leave a Reply

comments

Related Articles

error: