ಕರ್ನಾಟಕಪ್ರಮುಖ ಸುದ್ದಿ

ರೈತರಿಗೆ ಬಾಕಿ ಹಣ ಪಾವತಿಸಲು ಸಕ್ಕರೆ ಕಾರ್ಖಾನೆಗಳಿಗೆ ಸಚಿವ ಪುಟ್ಟರಾಜು ಸೂಚನೆ

ಮಂಡ್ಯ (ಸೆ.30): ಮಂಡ್ಯ ಜಿಲ್ಲೆಯ ಸಕ್ಕೆರೆ ಕಾರ್ಖಾನೆಗಳಿಗೆ ರೈತರು ಕಬ್ಬು ಸರಬರಾಜು ಮಾಡಿರುವ ಬಾಕಿ ಹಣವನ್ನು ಶೀಘ್ರ ಪಾವತಿಸಲು ಸಂಬಂಧಪಟ್ಟ ಸಕ್ಕರೆ ಕಾರ್ಖಾನೆಗಳ ಕ್ರಮವಹಿಸಬೇಕು ಎಂದು ಸಣ್ಣ ನೀರಾವರಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಸಿ.ಎಸ್.ಪುಟ್ಟರಾಜು ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಯವರು ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಮಂಡ್ಯ ಜಿಲ್ಲೆಯ ಸಮಸ್ಯೆ ಆಲಿಸಲು ನಡೆದ ರೈತ ಮುಖಂಡರುಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಮಂಡ್ಯ ಜಿಲ್ಲೆಯ ನಾಲ್ಕು ಸಕ್ಕರೆ ಕಾರ್ಖಾನೆಯಿಂದ ರೈತರಿಗೆ ರೂ 96.83 ಕೋಟಿ ಬಾಕಿ ಹಣವನ್ನು ಪಾವತಿ ಮಾಡಬೇಕಿದ್ದು, ಈ ಸಂಬಂಧ ಸಕ್ಕರೆ ಕಾರ್ಖಾನೆಗಳು ಶೀಘ್ರ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

ರೈತರು ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ 25 ದಿನದೊಳಗೆ, ಹಣವನ್ನು ರೈತರಿಗೆ ಪಾವತಿಸಬೇಕು. ಇಲ್ಲದಿದ್ದಲ್ಲಿ ಕಾರ್ಖಾನೆಗಳಲ್ಲಿ ದಾಸ್ತಾನಿರುವ ಸಕ್ಕರೆಯನ್ನು ವಶ ಪಡಿಸಿಕೊಳ್ಳವ ನಿರ್ಧಾರವನ್ನು ಕೈಗೊಳ್ಳಲು ಮುಂದಾಗಬೇಕಾಗುತ್ತದೆ ಎಂದು ಸಕ್ಕರೆ ಕಾರ್ಖಾನೆಗಳಿಗೆ ಎಚ್ಚರಿಕೆ ನೀಡಿದ ಸಚಿವರು, ಸಕ್ಕರೆ ಕಾರ್ಖಾನೆಗಳು ಮಾನವೀಯತೆ ದೃಷ್ಠಿಯಿಂದ ರೈತರ ಸಮಸ್ಯೆಗಳನ್ನು ಅರಿತು ಅವರಿಗೆ ಅನುಕೂಲವಾಗುವಂತಹ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ಬೆಂಬಲ ಬೆಳೆ ಯೋಜನೆಯಡಿ ರೈತರಿಂದ ಖರೀದಿಸಲಾದ ಭತ್ತಕ್ಕೆ ಇನ್ನೂ ಹಣ ನೀಡದಿರುವು ಒಳ್ಳೆಯ ಬೆಳವಣೆಗೆ ಅಲ್ಲ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕಾರ್ಯನ್ಮೂಕರಾಗಬೇಕು. ಅಧಿಕಾರಿಗಳು ರೈತರ ಬೆಂಬಲಕ್ಕೆ ಸದಾ ಮುಂಚೂಣಿಯಲ್ಲಿರಬೇಕು. ಮುಖ್ಯಮಂತ್ರಿಯವರ ಸೂಚನೆಯ ನಂತರವೂ ಬ್ಯಾಂಕ್‍ಗಳು ರೈತರಿಗೆ ಸಾಲ ಪಾವತಿಸಲು ನೋಟೀಸ್ ನೀಡುತ್ತಿರುವ ಬಗ್ಗೆ ಲೀಡ್ ಬ್ಯಾಂಕ್ ಅಧಿಕಾರಿಗಳು ತಕ್ಷಣ ಕ್ರಮವಹಿಸಿ, ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಹೇಳಿದರು.

ಮಂಡ್ಯ ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆ ಮಾಡುತ್ತಿರುವುದು ಅತೀ ದು:ಖದ ವಿಷಯವಾಗಿದ್ದು, ರೈತರಿಗೆ ಆತ್ಮಥೈರ್ಯ ತುಂಬುವ ಕೆಲಸವಾಗಬೇಕು. ಮುಖ್ಯಮಂತ್ರಿಗಳು ವಿಶೇಷ ಕಾಳಜಿವಹಿಸಿ ಮಂಡ್ಯ ಜಿಲ್ಲೆಯ ರೈತರನ್ನು ಆರ್ಥಿಕವಾಗಿ ಅಭಿವೃದ್ಧಿ ಪಡಿಸಲು ವಿಶೇಷ ಕಾರ್ಯಕ್ರಮವನ್ನು ರೂಪಿಸಲು ಸೂಚನೆ ನೀಡಿದ್ದು, ಇದರÀಂತೆ ಜಿಲ್ಲೆಯ ರೈತರ ಸಲಹೆಯನ್ನು ಪಡೆದು, ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಹಕಾರಿ ಕ್ಷೇತ್ರ ಬ್ಯಾಂಕ್‍ಗಳಲ್ಲಿ ಮಂಡ್ಯ ಜಿಲ್ಲೆಯ ರೈತರ ರೂ 515 ಕೋಟಿ ಸಾಲ ಮನ್ನವಾಗಲಿದೆ. ಯಾವ ರೈತರು ಸಾಲ ಪಡೆಯಲು ಆರ್ಹತೆ ಹೊಂದಿರುತ್ತಾರೋ, ಅಂತಹ ರೈತರಿಗೆ ಬ್ಯಾಂಕ್‍ಗಳು ನಿಯಮಾನುಸಾರ ಸಾಲ ನೀಡಲು ಮುಂದಾಗಬೇಕು. ಹೈನುಗಾರಿಕೆಯಲ್ಲಿ ರೈತರು ತಮ್ಮನ್ನು ಆರ್ಥಿವಾಗಿ ಅಭಿವೃದ್ಧಿ ಹೊಂದಲು ಮುಂದಾಗಿದ್ದಾರೆ. ಡೈರಿಗೆ ಹಾಲು ಸರಬರಾಜು ಮಾಡಿರುವ ರೈತರಿಗೆ ಬಾಕಿ ಹಣ ಶೀಘ್ರ ಪಾವತಿಯಾಗಬೇಕು. ಒಟ್ಟಿನಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ರೈತ ಬೆಂಬಲಕ್ಕೆ ಇದ್ದಾರೆ ಎಂಬ ಭಾವನೆ ರೈತರಲ್ಲಿ ಮುಡಬೇಕು ಎಂದು ತಿಳಿಸಿದರು.

ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅವರು ಮಂಡ್ಯ ಜಿಲ್ಲೆಯಲ್ಲಿ ನುಸಿರೋಗದಿಂದ ತೆಂಗು ಬೆಳೆಗಾರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ತೋಟಗಾರಿಕೆ ಅಧಿಕಾರಿಗಳು ಇದರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಂಜಾಗೃತಾ ಕ್ರಮಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸುವುದರ ಜೊತೆಯಲ್ಲಿ ನುಸಿ ನಿಯಂತ್ರಣ ಸಂಬಂಧ ಕ್ರಮವಹಿಸಲು ಕಾರ್ಯನ್ಮೂಕರಾಗಬೇಕು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಾವಣ್ಯ, ಆಹಾರ ಇಲಾಖೆ ಉಪ ನಿರ್ದೇಶಕರಾದ ಕುಮುದ, ಕೃಷಿ ಜಂಟಿ ನಿರ್ದೇಶಕರಾದ ರಾಜಾ ಸುಲೋಚನಾ, ರೈತ ಮುಖಂಡರುಗಳು, ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಹಾಗೂ ಇತರೆ ಗಣ್ಯರು ಭಾಗವಹಿಸಿದರು. (ಎನ್.ಬಿ)

Leave a Reply

comments

Related Articles

error: