ಮೈಸೂರು

ಮಗುವಿನೊಡನೆ ಸಹಗಮನ : ಅಪರೂಪದ ಮಾಸ್ತಿಕಲ್ಲು ಪತ್ತೆ

ಕೆ.ಹೆಮ್ಮನಹಳ್ಳಿ ಗ್ರಾಮದಲ್ಲಿ ತಾಯಿ ಮಗುವಿನೊಡನೆ ಸಹಗಮನದ ಅಪರೂಪದ ಮಾಸ್ತಿಕಲ್ಲು ಪತ್ತೆಯಾಗಿದೆ ಎಂದು ಮೈಸೂರಿನ ಕುವೆಂಪುನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರು ಹಾಗೂ ಎನ್.ಎಸ್.ಎಸ್ ಅಧಿಕಾರಿ ಡಾ.ಎಸ್.ಜಿ. ರಾಮದಾಸ ರೆಡ್ಡಿ ತಿಳಿಸಿದ್ದಾರೆ.

ಸತಿ ಪತಿಯೊಡನೆ ಸಹಗಮನ ಆಗಿರುವ ಸಾವಿರಾರು ವೀರ ಮಾಸ್ತಿ ಕಲ್ಲುಗಳು ದೇಶಾದಾದ್ಯಂತ ಸಂಶೋಧಿಸಲ್ಪಟ್ಟಿವೆ. ಆದರೆ ವೀರ ಮರಣ ಹೊಂದಿದಾಗ ಸತಿ  ತನ್ನ ಮಗನನ್ನು ಪಕ್ಕದಲ್ಲಿ ನಿಲ್ಲಿಸಿ ಕೊಂಡು ಸಹಗಮನಕ್ಕೆ ಒಳಗಾದ ಮಾಸ್ತಿಕಲ್ಲು ಶಿಲ್ಪಗಳು ದೇಶದಲ್ಲಿ  ಬೆರಳೆಣಿಕೆಯಷ್ಟು ಕಂಡುಬರುತ್ತವೆ.

ಇಲ್ಲಿಯವರೆಗೂ ಬಹುಶಃ ಪತ್ತೆ ಆಗದೇ ಇರುವ ತಾಯಿ ಎತ್ತಿಕೊಂಡು ಮಗುವಿನೊಡನೆ  ಸಹಗಮನವಾಗಿರುವ ಅಪರೂಪದ ಮಾಸ್ತಿಕಲ್ಲು ಶಿಲ್ಪ ಇದಾಗಿದ್ದು, ಇದು ಸುಮಾರು 13-14ನೇ ಶತಮಾನದ ಕಾಲಮಾನದ್ದಾಗಿದೆ ಎಂದು ತಿಳಿಸಿದ್ದಾರೆ.

ಮೈಸೂರು ತಾಲೂಕಿನ ಇಲವಾಲ ಹೋಬಳಿಯ ಬೆಳವಾಡಿ ಗ್ರಾಮಪಂಚಾಯಿತಿಯ  ಕೆ.ಹೆಮ್ಮನಹಳ್ಳಿ ಗ್ರಾಮದ ಹೊಸಕೆರೆ ಮುಂಭಾಗದ ಸಾವುಕಾರವುಂಡಿಯ ಬೊಮ್ಮಲಿಂಗೇಗೌಡರ ಹೊಲದಲ್ಲಿ ಹೆಮ್ಮನಹಳ್ಳಿಯಿಂದ ಮಾಣಿಕ್ಯಪುರಕ್ಕೆ ಹೋಗುವ ರಸ್ತೆಯ ಪಕ್ಕದ ಬಲಭಾಗದಲ್ಲಿ ಶೋಧವಾಗಿದೆ.

ಎನ್.ಎಸ್.ಎಸ್. ಹಿರಿಯ ಸ್ವಯಂ ಸೇವಕ ಚಾಮರಾಜು ಹಾಗೂ ಶ್ರೀನಿವಾಸ, ಮಧುಸೂದನ, ರವಿ, ವಿಕಾಸ್.ಎ.ಆರ್, ಸ್ಥಳೀಯರಾದ ಹೆಮ್ಮನಹಳ್ಳಿ ರಾಜು, ಪುಟ್ಟಸ್ವಾಮಿ ಇತರರೊಡನೆ ಕ್ಷೇತ್ರಕಾರ್ಯ ಮಾಡಿ ಪತ್ತೆ ಹಚ್ಚಿದ್ದಾರೆ.

Leave a Reply

comments

Related Articles

error: