ಮೈಸೂರು

ಡಾ.ಎ.ಡಿ.ಶ್ರೀನಿವಾಸನ್ ಸಂಗೀತಧಾರೆಗೆ ಪರವಶರಾದ ಪ್ರೇಕ್ಷಕರು

ಮೈಸೂರು, ಅ.1:- ಇತ್ತೀಚೆಗೆ ನಗರದ ಕಲಾಮಂದಿರದಲ್ಲಿ ವಿದ್ಯುಲ್ಲಹರಿ ಸಮೂಹದಿಂದ ಆಯೋಜಿಸಿದ್ದ ‘ಮೆಲ್ಲುಸಿರೆ ಸವಿಗಾನ’ ಕಾರ್ಯಕ್ರಮಕ್ಕೆ  ಜಿಲ್ಲಾಧಿಕಾರಿ ಅಭಿರಾಂ ಶಂಕರ್ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು  ಮೈಸೂರು ಇಂತಹ ಹಳೆಯ ಸುಮಧುರ ಹಾಡುಗಳ ಕಾರ್ಯಕ್ರಮ ಆಗಿಂದಾಗ್ಗೆ ಆಯೋಜಿಸುತ್ತಿರುವುದು ಸಂತೋಷದ ವಿಷಯ. ಇಲ್ಲಿ ಸಂಗ್ರಹವಾದ ಹಣ ಕೊಡಗು ಜಿಲ್ಲೆ ಸಂತ್ರಸ್ತರ ನಿಧಿಗೆ ತಲುಪಿಸುತ್ತಿರುವುದು ಮಾನವೀಯತೆಯ ಲಕ್ಷಣ ಎಂದು ತಿಳಿಸಿದರು. ನಾನು ಕೊಡಗು ಜಿಲ್ಲೆಯಲ್ಲಿ ಅಸಿಸ್ಟೆಂಟ್ ಕಮೀಷನರ್ ಆಗಿ ಸೇವೆ ಸಲ್ಲಿಸಿದ್ದೇನೆ. ಕೊಡಗು ಜಿಲ್ಲೆಗೆ ಪ್ರಥಮವಾಗಿ ಹಣ, ಆಹಾರ, ವಸ್ತುಗಳನ್ನು ತಲುಪಿಸುವ ವ್ಯವಸ್ಥೆ ಮೈಸೂರಿನಿಂದಲೇ ಪ್ರಾರಂಭವಾದದ್ದು ಎಂದು ಅವರು ಅಭಿಪ್ರಾಯಪಟ್ಟರು.

ವಿದ್ಯುಲ್ಲಹರಿ ಸಂಸ್ಥಾಪಕ-ನಿರ್ದೇಶಕ, ಎಸ್‍ಜೆಸಿಇ ಕಾಲೇಜಿನ ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಹಾಗೂ ಚತುರ್ಭಾಷಾ ಗಾಯಕ ಡಾ.ಎ.ಡಿ.ಶ್ರೀನಿವಾಸನ್ ಅವರು ಮಾತನಾಡಿ ಎಲ್ಲ ವಯೋಮಾನದವರಲ್ಲೂ ಸಂಗೀತದ ಅಭಿರುಚಿ ಬೆಳೆಸುವ ಉದ್ದೇಶದಿಂದ ಪ್ರತಿ ವರ್ಷವೂ ಇಂತಹ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಮೈಸೂರಿನಲ್ಲಿ ನೆಲೆಸಿರುವವರು ನಿತ್ಯವೂ ಒತ್ತಡದ ಪರಿಸ್ಥಿತಿಯಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ಮೈಸೂರಿನಲ್ಲಿ ಎಷ್ಟೆಲ್ಲ ಪ್ರತಿಭಾವಂತರು ಇದ್ದಾರೆ ಎಂಬುದನ್ನು ತೋರಿಸಿಕೊಟ್ಟ ಕಾರ್ಯಕ್ರಮ ‘ಮೆಲ್ಲುಸಿರೆ ಸವಿಗಾನ’. ಅನುಕೂಲತೆ ಇರುವವರು ಮೇಲೆ ಬರುವುದು ಸಹಜ. ಆದರೆ ಯಾವುದೇ ಅನುಕೂಲ ಇರದ ಪ್ರತಿಭಾವಂತರು ಎಲೆಮರೆಯ ಕಾಯಿಯ ಹಾಗೆ ಇರುತ್ತಾರೆ. ಅಂತಹ ಕಲಾವಿದರನ್ನು ಬೆಳಕಿಗೆ ತರುವ ಕೆಲಸವನ್ನು ವಿದ್ಯುಲ್ಲಹರಿ ಸಂಸ್ಥೆ ಮಾಡುತ್ತಿದೆ. ಎಂದಿನಂತೆ ಈ ಸಲವೂ ನಾಡಿನುದ್ದಗಲಕ್ಕೂ ಸಂಚರಿಸಿ, ಹಲವಾರು ಪ್ರತಿಭೆಗಳನ್ನು ಗುರ್ತಿಸಿ ಅವರನ್ನು ಮುಖ್ಯವಾಹಿನಿಗೆ ತರುವ ಉದ್ದೇಶ ಇದಾಗಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಜೆಎಸ್‍ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಬಿ.ಜಿ.ಸಂಗಮೇಶ್ವರ, ವಿದ್ಯುಲ್ಲಹರಿ ಅಧ್ಯಕ್ಷ ಎಸ್.ಶಶಿಕುಮಾರ್, ಗೌರವ ಕಾರ್ಯದರ್ಶಿ ಜೆ.ವಿ.ಆರ್.ನೈಧ್ರುವ, ಸಂಗೀತ ಸಂಯೋಜಕ ಎನ್.ಎಸ್.ಪ್ರಸಾದ್ ಹಾಗೂ ಮತ್ತಿತರರು ಭಾಗವಹಿಸಿದ್ದರು.

ವೇದಿಕೆ ಕಾರ್ಯಕ್ರಮದ ನಂತರ ಸತತ ಮೂರು ಗಂಟೆಗಳ ಕಾಲ ತಡೆರಹಿತ ಚತುರ್ಭಾಷಾ ಹಳೆಯ ಹಾಡುಗಳ ಮಹಾಪೂರವೇ ಹರಿಯಿತು. ಡಾ.ಎ.ಡಿ.ಶ್ರೀನಿವಾಸನ್‍ರವರ ಸುಮಧುರ ಕಂಠದಿಂದ ಎಸ್.ಬಿ.ಬಾಲಸುಬ್ರಹ್ಮಣ್ಯಂ, ಕಿಶೋರ್ ಕುಮಾರ್, ಮಹಮದ್ ರಫಿ ಇವರ ಧ್ವನಿಯನ್ನೇ ಹೋಲುವ ರೀತಿ ಹಾಡಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಏಕೆಂದರೆ ಒಬ್ಬ ಗಾಯಕ ಒಬ್ಬ ಹಿನ್ನೆಲೆ ಗಾಯಕನ ಹಾಗೆ ಹಾಡುವುದು ಸಹಜ. ಆದರೆ ಬೇರೆ ಬೇರೆ ಗಾಯಕರ ಹಾಗೆ ಅವರ ಧ್ವನಿಯನ್ನು ಅನುಕರಣೆ ಮಾಡಿ ಒಬ್ಬರೇ ಹಾಡುವುದು ಬಹಳ ವಿರಳ.

ಡಾ.ಎ.ಡಿ.ಶ್ರೀನಿವಾಸನ್‍ರವರಿಗೆ ಮಂಜುನಾಥ್, ಹಂಸಿನಿ, ಅನನ್ಯ ಹಾಗೂ ಶರಣ್ಯ ಉತ್ತಮ ಸಹಕಾರ ನೀಡಿದರು. ಕೀ ಬೋರ್ಡ್ ಕಲಾವಿದ ಪ್ರಸನ್ನ ಕುಮಾರ್, ಕೊಳಲು ಮಾಂತ್ರಿಕ ಹಾಗೂ ಝೀ ಕನ್ನಡ ವಾಹಿನಿಯ ಸರಿಗಮಪ ಖ್ಯಾತಿಯ ನೀತು ನಿನಾದ್ ಇಂಪಾಗಿ ನುಡಿಸಿದರು. ಇತರ ವಾದ್ಯವೃಂದದವರು ಇವರಿಗೆ ಉತ್ತಮ ಸಾಥ್ ನೀಡಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: