ದೇಶಪ್ರಮುಖ ಸುದ್ದಿ

ಸುಪ್ರೀಮ್ ಕೋರ್ಟ್ ಹೇಳಿದೆ, ವ್ಯಭಿಚಾರ ಅಪರಾಧವಲ್ಲ ಎಂದ ಪತಿ: ಪತ್ನಿ ಆತ್ಮಹತ್ಯೆ!

ಚೆನ್ನೈ (ಅ.1): ವ್ಯಭಿಚಾರ ಅಪರಾಧವಲ್ಲ ಎಂದು ಭಾರತದ ಸರ್ವೋಚ್ಚ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದ ಮೂರೇ ದಿನಗಳಲ್ಲಿ, ಇಂಥದೊಂದು ಪ್ರಕರಣ ಓರ್ವ ಮಹಿಳೆಯ ಪ್ರಾಣವನ್ನು ತೆಗೆದುಕೊಂಡಿದೆ.

ಮನೆಯವರ ವಿರೋಧವನ್ನೂ ಧಿಕ್ಕರಿಸಿ ಎರಡು ವರ್ಷಗಳ ಹಿಂದೆ 27 ವರ್ಷದ ಜಾನ್ ಪಾಲ್ ಫ್ರಾಂಕ್ಲಿನ್ ಎಂಬಾತನನ್ನು ಪ್ರೇಮ ಮದುವೆಯಾಗಿದ್ದ 24 ವರ್ಷದ ಪುಷ್ಪಲತಾ ಎಂಬುವವರು, ತನ್ನ ಗಂಡನ ಅನೈತಿಕ ಸಂಬಂಧದಿಂದ ಬೇಸತ್ತು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ ದುರಂತ ಶನಿವಾರ ರಾತ್ರಿ ನಡೆದಿದೆ.

ನಾನು ಬೇರೆಯವಳೊಂದಿಗೆ ಸಂಬಂಧವಾದರೂ ಇಟ್ಕೊತೀನಿ, ಏನಾದ್ರೂ ಮಾಡ್ಕೋತೀನಿ. ಕೇಳೋಕ್ಕೆ ನೀನ್ಯಾರು. ಸುಪ್ರೀಂ ಕೋರ್ಟ್ ಹೇಳಿಲ್ವಾ ಅನೈತಿಕ ಸಂಬಂಧ ಅಪರಾಧವಲ್ಲ ಅಂತ. ನೀವು ಯಾವ ಕೇಸನ್ನೂ ಬುಕ್ ಮಾಡಲು ಸಾಧ್ಯವಿಲ್ಲ ಅಂತ ಫ್ರಾಂಕ್ಲಿನ್ ಸವಾಲು ಎಸೆದಿದ್ದ.

ಒಂದು ಮಗುವನ್ನೂ ಹೆತ್ತಿರುವ ಪುಷ್ಪಲತಾ ಕ್ಷಯ ರೋಗದಿಂದ ಬಳಲುತ್ತಿದ್ದಳು. ಆಗಾಗ ಹುಷಾರಿಲ್ಲದೆ ಮಲಗುತ್ತಿದ್ದಳು. ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಫ್ರಾಂಕ್ಲಿನ್ ಚಿಕಿತ್ಸೆಗಾಗಿ ಆಕೆಗೆ ಹಣಕಾಸಿನ ನೆರವು ನೀಡುವುದನ್ನು ನಿಲ್ಲಿಸಿದ್ದ ಮತ್ತು ಕ್ರಮೇಣ ಆಕೆಯಿಂದ ದೂರವಾಗಲು ಆರಂಭಿಸಿದ್ದ ಎನ್ನಲಾಗಿದೆ.

ಇಬ್ಬರ ನಡುವಿನ ಅಂತರ ಕ್ರಮೇಣ ಜಾಸ್ತಿಯಾಗುತ್ತ ಸಾಗುತ್ತಿದ್ದಾಗ, ಪುಷ್ಪಲತಾ ತನ್ನ ಗಂಡನ ಸ್ನೇಹಿತನಿಗೆ ಫೋನ್ ಮಾಡಿ ವಿಚಾರಿಸಿದ್ದಾಳೆ. ಆಗ ಆಕೆಯ ಅನುಮಾನ ಮತ್ತು ಹೆದರಿಕೆ ನಿಜವಾಗಿದೆ. ಫ್ರಾಂಕ್ಲಿನ್ ಆವಾಗಾಗಲೆ ಮತ್ತೊಬ್ಬ ಮಹಿಳೆಯ ಮೋಹಪಾಶದಲ್ಲಿ ಸಿಲುಕಿದ್ದ ಮತ್ತು ಆಕೆಯೊಂದಿಗೆ ಅನೈತಿಕ ಸಂಬಂಧವನ್ನೂ ಇಟ್ಟುಕೊಂಡಿದ್ದ.

ಪ್ರತಿದಿನ ಮನೆಗೆ ತಡವಾಗಿ ಬರುತ್ತಿದ್ದ ಫ್ರಾಂಕ್ಲಿನ್ ನನ್ನು ಏನು ವಿಷಯವೆಂದು ಕೇಳಿದ್ದಾಳೆ ಮತ್ತು  ಹೆಂಗಸಿನೊಂದಿಗಿನ ಸಂಬಂಧವನ್ನು ಕೆದಕಿ ಜಗಳ ತೆಗೆದಿದ್ದಾಳೆ. ಮತ್ತೊಬ್ಬ ಹೆಂಗಸಿನಿಂದ ದೂರವಿರಬೇಕು ಎಂದು ಆಗ್ರಹಿಸಿದ್ದಾಳೆ. ಆತ ಯಾವುದಕ್ಕೂ ಬಗ್ಗದಿದ್ದಾಗ ಪೊಲೀಸ್ ಕಂಪ್ಲೇಂಟ್ ನೀಡುವುದಾಗಿ ಪುಷ್ಪಲತಾ ಫ್ರಾಂಕ್ಲಿನ್ ನನ್ನು ಬೆದರಿಸಿದ್ದಾಳೆ.

ಆದರೆ, ಅಷ್ಟರಲ್ಲಾಗಲೇ ಸರ್ವೋಚ್ಚ ನ್ಯಾಯಾಲಯ ಅನೈತಿಕ ಸಂಬಂಧ ಅಪರಾಧವಲ್ಲ ಎಂದು ಐತಿಹಾಸಿಕ ತೀರ್ಪು ನೀಡಿಯಾಗಿತ್ತು. ಇದರ ಲಾಭ ಪಡೆದ ಫ್ರಾಂಕ್ಲಿನ್, ಬೇಕಿದ್ದರೆ ಪೊಲೀಸರಿಗೆ ದೂರು ನೀಡು, ಪೊಲೀಸರು ನನ್ನನ್ನು ಬುಕ್ ಮಾಡಲು ಸಾಧ್ಯವೇ ಇಲ್ಲ. ಅನೈತಿಕ ಸಂಬಂಧ ಅಪರಾಧವಲ್ಲ ಅಂತ ಸುಪ್ರೀಂ ಕೋರ್ಟ್ ಹೇಳಿದೆ ಎಂದು ತಿರುಗೇಟು ನೀಡಿದ್ದಾನೆ.

ಹೆದರಿಸಿ, ಬೆದರಿಸಿ ಪ್ರಯೋಜನವಿಲ್ಲವೆಂದು ಅರಿತ ಪುಷ್ಪಲತಾ, ಎಂಜಿಆರ್ ನಗರದಲ್ಲಿರುವ ತನ್ನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ, ಸುಪ್ರೀಂ ಕೋರ್ಟ್ ಒಂದು ವಿಷಯವನ್ನು ಸ್ಪಷ್ಟಪಡಿಸಿದೆ. ಅದೇನೆಂದರೆ, ಅನೈತಿಕ ಸಂಬಂಧ ಬಾಳ ಸಂಗಾತಿಯ ಸಾವಿಗೆ ಕಾರಣವಾದರೆ, ಅದು ವ್ಯಭಿಚಾರ ನಡೆಸುತ್ತಿದ್ದ ವ್ಯಕ್ತಿಯ ಅಪರಾಧವಾಗುತ್ತದೆ. ಈ ಪ್ರಕರಣದಲ್ಲೂ ಹೆಂಡತಿಯ ಸಾವಿಗೆ ಗಂಡನ ವ್ಯಭಿಚಾರವೇ ಕಾರಣವಾಗಿದೆ ಎಂಬ ವಿಷಯ ಸ್ಪಷ್ಟವಾದರೆ ಗಂಡನಿಗೆ ಶಿಕ್ಷೆ ಖಂಡಿತ. (ಎನ್.ಬಿ)

Leave a Reply

comments

Related Articles

error: