ಮೈಸೂರು

ವಿಶ್ವ ಹಿರಿಯ ನಾಗರಿಕರ ದಿನ: ಐವರು ಸಾಧಕ ಹಿರಿಯರಿಗೆ ಸನ್ಮಾನ

ಮೈಸೂರು,ಅ.1-ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಐವರು ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜೆಎಸ್ಎಸ್ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಹಾಗೂ ಮೈಸೂರು ಜಿಲ್ಲೆಯ ಹಿರಿಯ ನಾಗರಿಕರಿಗಾಗಿ ಶ್ರಮಿಸುತ್ತಿರುವ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಲಲಿತ್ ಮಹಲ್ ರಸ್ತೆಯಲ್ಲಿರುವ ಸರ್ಕಾರಿ ಬಾಲಕಿಯರ ಬಾಲಮಂದಿರದಲ್ಲಿ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕ ಹಿರಿಯರನ್ನು ಸನ್ಮಾನಿಸಲಾಯಿತು.

ಕಲಾ ಸೇವೆಯಲ್ಲಿ ಬಿ.ಜಿ.ವಾಸುದೇವನ್, ಶಿಕ್ಷಣ ಹಾಗೂ ಸಾಹಿತ್ಯದಲ್ಲಿ ಡಾ.ಎಚ್.ಕೆ.ರಾಮನಾಥ್, ಲಲಿತಕಲೆಯಲ್ಲಿ ಬಿ.ಎನ್.ಚನ್ನಪ್ಪಾಚಾರ್ಯ, ಕ್ರೀಡೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಎನ್.ವೀರಯ್ಯ, ಸಮಾಜಸೇವೆ, ದೇಶ ಸೇವೆಯಲ್ಲಿ ಆರ್.ಜೆ.ಪಾಲ್ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್, ಇಡೀ ವಿಶ್ವಕ್ಕೆ ಇವತ್ತು ಹಿರಿಯ ನಾಗರಿಕರ ದಿನ. ಆದರೆ ಭಾರತೀಯರಿಗೆ ಪ್ರತಿದಿನವೂ ಹಿರಿಯ ನಾಗರಿಕರ ದಿನವಾಗಿತ್ತು. ಭಾರತೀಯ ಸಂಸ್ಕೃತಿಯಲ್ಲಿ ಹಿರಿಯರ ಮಾತಿನಂತೆ ನಡೆದುಕೊಳ್ಳುವುದನ್ನು ಬಹಳ ಹಿಂದಿನಿಂದಲೂ ನೋಡಿಕೊಂಡು ಬಂದಿದ್ದೇವೆ. ಆದರೆ ಬದಲಾದ ಜೀವನ ಶೈಲಿಯಲ್ಲಿ, ವ್ಯವಹಾರಿಕ, ಭೌತಿಕವಾಗಿ ಯಂತ್ರವಾಗಿ ಕೆಲಸ ಮಾಡಿದ ಮೇಲೆ ಆ ರೀತಿಯ ಭಾವನಾತ್ಮಕವಾದ ಸಂಬಂಧವನ್ನು ಕಳಚಿಕೊಳ್ಳುವ ಕೆಲಸ ಮಾಡುತ್ತ ಬಂದಿದ್ದೇವೆ ಎಂದರು.

ಪೋಷಕರನ್ನು ಮಕ್ಕಳು ನೋಡಿಕೊಳ್ಳದಿದ್ದರೆ ಸೆಕ್ಷನ್ ಗಳ ಪ್ರಕಾರ ಯಾವೆಲ್ಲ ಶಿಕ್ಷೆಯಿದೆ ಎಂಬುದರ ಬಗ್ಗೆ ಕಾನೂನಿದೆ. ಆದರೆ ಕಾನೂನಿಗಿಂತ ಹೆಚ್ಚಿರುವುದು ಹೃದಯದ ಸಂಬಂಧ. ನಮ್ಮ ತಂದೆ-ತಾಯಿಯನ್ನು ಎಷ್ಟು ಪ್ರೀತಿಸಬೇಕು, ಗೌರವಿಸಬೇಕು, ಯಾವ ರೀತಿ ನೋಡಿಕೊಳ್ಳಬೇಕು ಅಂತ ಕಾನೂನು ಹೇಳಬಾರದು. ನಮ್ಮ ಹೃದಯ ಹೇಳಬೇಕು. ಯಾಂತ್ರಿಕ ಜೀವನ ಶೈಲಿಯಲ್ಲಿ ಹೃದಯ ಮಾತನ್ನು, ಭಾವನಾತ್ಮಕ ಸಂಬಂಧವನ್ನು ಕಳಚಿಕೊಳ್ಳುತ್ತಿರುವುದರಿಂದ ಹಿರಿಯರನ್ನು ಭಾರ ಅಂತ ಭಾವಿಸುತ್ತಿರುವುದರಿಂದ ಪ್ರಸ್ತುತದಲ್ಲಿ ವೃದ್ಧಾಶ್ರಮಗಳು ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾಋದ ಸದಸ್ಯ ಕಾರ್ಯದರ್ಶಿ ಸಿ.ಜಿ.ಮೊಹಮ್ಮದ್ ಮುಜೀರುಲ್ಲಾ, ಜೆಎಸ್ಎಸ್ ಮಹಾವಿದ್ಯಾಪೀಠದ ಸಾಮಾನ್ಯ ಅಭಿವೃದ್ಧಿ ವಿಭಾಗದ ಉಪ ನಿರ್ದೇಶಕ ಎಂ.ಸಿರಿಯಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಕೆ.ರಾಧ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಿ.ಎಸ್.ಅಭಿಕುಮಾರ್, ಜೆಎಸ್ಎಸ್ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಯೋಜನಾ ಸಂಯೋಜನಾಧಿಕಾರಿ ಎಸ್.ಬಸವರಾಜು ಇತರರು ಉಪಸ್ಥಿತರಿದ್ದರು. (ಎಚ್.ಎನ್, ಎಂ.ಎನ್)

Leave a Reply

comments

Related Articles

error: