ಮೈಸೂರು

ರಾಜ್ಯಕ್ಕೆ 2ನೇ ಸ್ಥಾನ ಪಡೆದ ಕೃಷಿ ಸಾಧಕಿ ವಿರಜಮ್ಮಗೆ ಸನ್ಮಾನ

ಬೈಲಕುಪ್ಪೆ: ಆಹಾರ ಭದ್ರತೆಯಲ್ಲಿ ರೈತ ಮಹಿಳೆ ವಿರಜಮ್ಮ ಅವರ ಕಾಣಿಕೆ ಇದೆ. ಅವರನ್ನು ತಾಲ್ಲೂಕು ಪತ್ರಕರ್ತರ ಸಂಘ ಗುರ್ತಿಸಿರುವುದು ಹೆಮ್ಮೆಯಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ. ಎಸ್.ಟಿ. ಚಂದ್ರೇಗೌಡ ತಿಳಿಸಿದರು.

ತಾಲೂಕಿನ ಕೊಣಸೂರು ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಪಿರಿಯಾಪಟ್ಟಣ ತಾಲ್ಲೂಕು ಪತ್ರಕರ್ತರ ಸಂಘದ ವತಿಯಿಂದ ರೈತರ ದಿನಾಚರಣೆ ಅಂಗವಾಗಿ ರಾಗಿ ಬೆಳೆ ಇಳುವರಿಯಲ್ಲಿ ರಾಜ್ಯದ 2ನೇ ಸ್ಥಾನ ಪಡೆದ ವಿರಜಮ್ಮನಿಗೆ ಸನ್ಮಾನ ಮಾಡಿದ ನಂತರ ಮಾತನಾಡಿದರು.

ಯಾವುದೇ ರೀತಿಯ ಆಸೆ ಆಮಿಷ ಇಲ್ಲದೆ ನಿಸ್ವಾರ್ಥದಿಂದ ತನ್ನ ದುಡಿಮೆಯನ್ನು ನಂಬಿ, 2015-16ನೇ ಸಾಲಿನಲ್ಲಿ ರಾಗಿ ಬೆಳೆದು ಅಧಿಕ ಇಳುವರಿ ಪಡೆದು ಯಶಸ್ವಿಯಾಗಿರುವುದರಿಂದ ರಾಜ್ಯದಲ್ಲಿ 2ನೇ ಸ್ಥಾನ ಪಡೆದಿರುವ ವಿರಜಮ್ಮನವರಿಗೆ 25 ಸಾವಿರ ರೂ. ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ಕಳೆದ ಡಿ.24 ರಂದು ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ ಕೊಣಸೂರು ಗ್ರಾಮದವರೇ ಆದ ವಿರಜಮ್ಮನವರನ್ನು ಸನ್ಮಾನಿಸಲಾಗಿತ್ತು. ಆದ್ದರಿಂದ ನಮ್ಮದೇ ತಾಲ್ಲೂಕಿನವರಾಗಿದ್ದು ಇವರನ್ನು ಗುರುತಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಸರ್ಕಾರದಿಂದ ನಮ್ಮ ಸಾಮರ್ಥ್ಯವನ್ನು ಮೀರಿ ರೈತರಿಗೆ ಸೌಲಭ್ಯ ಒದಗಿಸುತ್ತಿದ್ದು, ಕೃಷಿ ಇಲಾಖೆಯಿಂದ ಕೃಷಿ ಭಾಗ್ಯವನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡವರಿಗೆ ಡೀಸಲ್, ಯಂತ್ರ ಹಾಗೂ ತುಂತುರು ಪೈಪ್ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು ಎಂದರು.

ಪರಿಶಿಷ್ಟ ಜಾತಿಯವರಿಗೆ ಸೇರಿದ ರೈತರಿಗೆ ಶೇ.90 ಭಾಗ ಹಾಗು ಸಾಮಾನ್ಯರಿಗೆ ಶೇ.20 ಭಾಗ ಸಹಾಯಧನವನ್ನು ಯೋಜನೆಯಲ್ಲಿ ನೀಡಲಾಗುವುದು. ರೈತರು ಸಂಬಂಧಪಟ್ಟ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿ ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.

ರೈತ ಮುಖಂಡ ಆನಂದ್ ಮಾತನಾಡಿ, ಕೃಷಿ ಇಲಾಖೆಯಿಂದ ಗ್ರಾಮೀಣ ಪ್ರದೇಶದ ರೈತರಿಗೆ ಸರಿಯಾದ ಮಾಹಿತಿ ದೊರೆಯದೆ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಸರಿಪಡಿಸಬೇಕೆಂದು ತಿಳಿಸಿದರು.

ಮಾಜಿ ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಯೋಗೇಶ್ ಮಾತನಾಡಿ, ರಸಗೊಬ್ಬರ ಮಾರಾಟ ಅಂಗಡಿಗಳಲ್ಲಿ ಕಳಪೆ ಗೊಬ್ಬರ ಮತ್ತು ಔಷಧಿಗಳನ್ನು ರೈತರಿಗೆ ನೀಡುತ್ತಿದ್ದು ಇದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಅಧಿಕಾರಿಗಳು ಕಡಿವಾಣ ಹಾಕಬೇಕೆಂದು ಮನವಿ ಮಾಡಿದರು.

ಭುವನಹಳ್ಳಿ ಗ್ರಾ.ಪಂ.ಅಧ್ಯಕ್ಷ ಈರೇಗೌಡ ಮಾತನಾಡಿದರು. ಈ ಸಂದರ್ಭ ಪಿರಿಯಾಪಟ್ಟಣ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಡಿ. ರಮೇಶ್, ಪ್ರಧಾನ ಕಾರ್ಯದರ್ಶಿ ಆರ್.ಎಸ್. ಚೆನ್ನಪ್ಪ, ಖಜಾಂಚಿ ಶಿವದೇವ್, ಉಪಾಧ್ಯಕ್ಷ ಎಂ.ಎ. ರಾಮೇಗೌಡ, ಸಹಕಾರ್ಯದರ್ಶಿ ಎಸ್.ಅಶೋಕ್, ಬೆಟ್ಟದಪುರ ಕೃಷಿ ಸಹಾಯಕ ಅಧಿಕಾರಿ ಸಂದೀಪ್, ಕೃಷಿ ಅಧಿಕಾರಿ ಕೀರ್ತಿಕುಮಾರ್, ತಾ.ಪಂ.ಸದಸ್ಯ ಶೋಭಾಚಂದ್ರಪ್ಪ, ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Reply

comments

Related Articles

error: