ಪ್ರಮುಖ ಸುದ್ದಿ

ನಗರಸಭೆ ಪೌರಾಯುಕ್ತರ ಕಚೇರಿಗೆ ಮುತ್ತಿಗೆ : ಎಸ್‍ಡಿಪಿಐ ಎಚ್ಚರಿಕೆ

ರಾಜ್ಯ(ಮಡಿಕೇರಿ) ಅ.2 : – ನಗರದ ಮಹದೇವಪೇಟೆಯಲ್ಲಿ ರಸ್ತೆ ನಿರ್ಮಾಣದ ಸಂದರ್ಭ ಕಳಪೆ ಕಾಮಗಾರಿ ನಿರ್ವಹಿಸಿದ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಹಾಗೂ ನಗರಸಭೆಯ ಬಿಲ್ ಸಂಗ್ರಹದಲ್ಲಿ 2 ಕೋಟಿ ರೂ.ಗಳಿಗೂ ಅಧಿಕ ಮೊತ್ತ ವಂಚಿಸಿದ ಪ್ರಕರಣದ ಕುರಿತು ಸಿಐಡಿ ತನಿಖೆ ನಡೆಸಬೇಕೆಂದು   ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ನಗರ ಘಟಕ ಒತ್ತಾಯಿಸಿದೆ.

ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಎಸ್‍ಡಿಪಿಐ ನಗರ ಪ್ರಧಾನ ಕಾರ್ಯದರ್ಶಿ ರಿಯಾಜ್ ಏಳು ದಿನಗಳ ಒಳಗಾಗಿ ಈ ಎರಡು ಪ್ರಕರಣಗಳ ಬಗ್ಗೆ ನಗರಸಭೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಪೌರಾಯುಕ್ತರ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.

ಎರಡು ವರ್ಷಗಳ ಹಿಂದೆ ಮಹದೇವಪೇಟೆ ರಸ್ತೆಯನ್ನು ಕಾಂಕ್ರಿಟೀಕರಣ ಮಾಡಲಾಗಿದ್ದು, ನಿರ್ಮಾಣವಾದ ಕೆಲವೇ ತಿಂಗಳುಗಳಲ್ಲಿ ರಸ್ತೆ ಗುಂಡಿ ಬಿದ್ದಿದೆ. ಈ ಬಗ್ಗೆ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ ಸಂದರ್ಭ ಪ್ರಕರಣದ ತನಿಖೆಯನ್ನು ಲೋಕಾಯುಕ್ತಕ್ಕೆ ವಹಿಸುವಂತೆ ನಗರಸಭೆಯ ನಿರ್ಣಯ ಕೈಗೊಳ್ಳಲಾಗಿದೆ. ಆದರೆ ನಿರ್ಣಯವಾಗಿ ಒಂದು ವರ್ಷ ಕಳೆದರೂ ಈವರೆಗೆ ಪ್ರಕರಣದ ತನಿಖೆಯನ್ನು ಯಾವುದೇ ಸಂಸ್ಥೆಗೂ ವಹಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗರಸಭೆ ವ್ಯಾಪ್ತಿಯಲ್ಲಿ ನಡೆದ ಯುಜಿಡಿ ಕಾಮಗಾರಿಯಿಂದಾಗಿ ಬಹುತೇಕ ರಸ್ತೆಗಳು ಹಾಳಾಗಿ ಜನರ ಓಡಾಟ ಮತ್ತು ವಾಹನಗಳ ಸಂಚಾರ ಅಸಾಧ್ಯವಾಗಿದೆ. ಈ ರಸ್ತೆಗಳ ಅಭಿವೃದ್ಧಿಗೆ ಒಂದು ವಾರದ ಒಳಗಾಗಿ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ನಗರಸಭೆಯ ಬಿಲ್ ಕಲೆಕ್ಟರ್ ಸಜಿತ್ ಎಂಬಾತ ನಗರಸಭೆಗೆ ಸಲ್ಲಿಕೆಯಾಗಬೇಕಿದ್ದ ಸಾರ್ವಜನಿಕರ ಸುಮಾರು 2 ಕೋಟಿ ರೂ.ಗಳಿಗಿಂತಲೂ ಅಧಿಕ ಮೊತ್ತವನ್ನು ವಂಚಿಸಿದ್ದು, ಈತನ ವಿರುದ್ಧ ಸಮರ್ಪಕವಾದ ದಾಖಲೆಗಳನ್ನು ಪೊಲೀಸರಿಗೆ ನೀಡಲಾಗಿದೆ. ನಗರಸಭೆಯ ನಿರ್ಲಕ್ಷ್ಯದಿಂದಾಗಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ ವರದಿ ಸಲ್ಲಿಸಿದ್ದಾರೆ. ಈ ಬಗ್ಗೆ ನಗರಸಭೆಯ ಹಲವು ಸಾಮಾನ್ಯ ಸಭೆಗಳಲ್ಲಿ ಪ್ರಸ್ತಾಪವಾಗಿದ್ದರೂ, ಇದುವರೆಗೆ ಸಂಬಂಧಿಸಿದವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲವೆಂದು ಆರೋಪಿಸಿದ ರಿಯಾಜ್ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

ಮೂರು ಬೇಡಿಕೆಗಳನ್ನು ಅ.7ರ ಒಳಗಾಗಿ ಈಡೇರಿಸದಿದ್ದಲ್ಲಿ ಸಾರ್ವಜನಿಕರನ್ನು ಒಗ್ಗೂಡಿಸಿ ಅ.8ರಂದು ನಗರಸಭೆಯ ಪೌರಾಯುಕ್ತರ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಇದೇ ಸಂದರ್ಭ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ನಗರಾಧ್ಯಕ್ಷ ಖಲೀಲ್ ಬಾಷಾ, ಪ್ರಮುಖರಾದ ಮುಸ್ತಫ, ಬಶೀರ್ ಹಾಗೂ ಉರೈರಾ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: