ಮೈಸೂರು

ಹಣ್ಣಿನ ಉದ್ಯಮಿಯೊಬ್ಬರ‌ ಅಪಹರಣ ಪ್ರಕರಣ : 24 ಗಂಟೆಯೊಳಗೆ ಪ್ರಕರಣ ಭೇದಿಸಿ ಅಪಹರಣಕಾರರನ್ನು ಹೆಡೆಮುರಿ ಕಟ್ಟಿದ ಪೊಲೀಸರು

ಮೈಸೂರು,ಅ.2:- ಕೇರಳ ‌ಮೂಲದ ಹಣ್ಣಿನ ಉದ್ಯಮಿಯೊಬ್ಬರ‌ ಅಪಹರಣ ಪ್ರಕರಣವನ್ನು ಘಟನೆ ನಡೆದ 24 ಗಂಟೆಯೊಳಗೆ ಹುಣಸೂರು ವೃತ್ತದ ಪೊಲೀಸರು ಭೇದಿಸಿ ಅಪಹರಣಕಾರರನ್ನು ಹೆಡೆಮುರಿ ಕಟ್ಟಿದ  ಘಟನೆ ನಡೆದಿದೆ.

ಕೇರಳ ರಾಜ್ಯದ ತಲಚೇರಿ ನಿವಾಸಿ ಸುಬೇರ್ ಎಂಬಾತ ಮೂಲತಃ ಹಣ್ಣಿನ ವ್ಯಾಪಾರಿಯಾಗಿದ್ದು, ತನ್ನ ವ್ಯವಹಾರಕ್ಕೆ ಹಣ್ಣುಗಳನ್ನು ಕೊಳ್ಳಲು ತನಗೆ ಸೇರಿದ ಮಹೇಂದ್ರ ವಾಹನದಲ್ಲಿ ಚಾಲಕ, ಸಹಾಯಕನ ಜೊತೆಗೆ ಬೆಂಗಳೂರಿಗೆ ಹೋಗುತ್ತಿದ್ದಾಗ  1-10-2018 ರಂದು ಬೆಳಗಿನ ಜಾವ 1 ಗಂಟೆ ಸುಮಾರಿಗೆ ಹುಣಸೂರು-ವಿರಾಜಪೇಟೆ ಮುಖ್ಯ ರಸ್ತೆಯಲ್ಲಿರುವ ಕರ್ಣಕುಪ್ಪೆ ಗೇಟ್ ಬಳಿ ಅಪಹರಣಕಾರರ ತಂಡವೊಂದು ಉದ್ಯಮಿ ‌ಸುಬೇರ್  ವಾಹನವನ್ನು ಅಡ್ಡಗಟ್ಟಿ ಚಾಲಕ, ಸಹಾಯಕ ಇಬ್ಬರನ್ನೂ ಬಲವಂತವಾಗಿ ಕೆಳಕ್ಕಿಳಿಸಿ ಸುಬೇರ್ ಸಮೇತ ಆತನ ವಾಹನವನ್ನು ದರೋಡೆ ಮಾಡಿಕೊಂಡು ಹೋಗಿದ್ದರು. ನಂತರ ಸುಬೇರ್ ನ ಚಾಲಕ ರಹೀಂ ಎಂಬಾತ ನೀಡಿದ ದೂರನ್ನು ಪಡೆದು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಅಪಹರಣಕಾರರ ಬೆನ್ನು ಹತ್ತಿದ ಪೊಲೀಸರ ತಂಡ 24 ಗಂಟೆಯೊಳಗೆ ಮಂಗಳೂರು ಮೂಲದ 07 ಜನ ಆರೋಪಿಗಳನ್ನು ಅವರು ಕೃತ್ಯಕ್ಕೆ ಬಳಸಿದ ಮಹೀಂದ್ರಾ XUV500 ಕಾರಿನ ಸಮೇತ ಬಂಧಿಸಿ, ಉದ್ಯಮಿ ಸುಬೇರ್ ನನ್ನು ಆತನ ವಾಹನದ ಸಮೇತ ಸುರಕ್ಷಿತವಾಗಿ ಕರೆತಂದಿದ್ದು, ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಕಾರ್ಯಾಚರಣೆಯನ್ನು ಮೈಸೂರು ಜಿಲ್ಲಾ ಎಸ್.ಪಿ ಅಮಿತ್ ಸಿಂಗ್, ಹೆಚ್ಚುವರಿ ಎಸ್.ಪಿ ಸ್ನೇಹಾ ಅವರ ಸೂಚನೆಯಂತೆ, ಹುಣಸೂರು ಉಪವಿಭಾಗದ ಡಿವೈಎಸ್ಪಿ ಭಾಸ್ಕರ್ ರೈ ಅವರ ಮಾರ್ಗದರ್ಶನದಲ್ಲಿ ಹುಣಸೂರು ಸರ್ಕಲ್ ಇನ್ಸ್ಪೆಕ್ಟರ್ ಕೆ.ಸಿ.ಪೂವಯ್ಯ ರವರ ನೇತೃತ್ವದ ತಂಡ ಯಶಸ್ವಿಯಾಗಿ ನಿರ್ವಹಿಸಿದ್ದು, ತಂಡದಲ್ಲಿ ಹುಣಸೂರು ಗ್ರಾಮಾಂತರ ಠಾಣಾಧಿಕಾರಿ ಶಿವಪ್ರಕಾಶ್, ವೃತ್ತ ಕಛೇರಿ ಸಿಬ್ಬಂದಿಗಳಾದ ಲಿಂಗರಾಜಪ್ಪ, ಪ್ರಸಾದ್ ಮತ್ತು ಬಿಳಿಕೆರೆ ಠಾಣಾ ಸಿಬ್ಬಂದಿ ಚೇತನ್ ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: