ಕರ್ನಾಟಕಪ್ರಮುಖ ಸುದ್ದಿ

ಮುಸ್ಲಿಮರು ಶ್ರೀರಾಮನ ವಂಶಸ್ಥರು, ಮಂದಿರ ನಿರ್ಮಾಣಕ್ಕೆ ಸಹಕರಿಸಬೇಕು : ಕೇಂದ್ರ ಸಚಿವ

ಮಥುರಾ (ಅ.2): ಮುಸ್ಲಿಮರು ಶ್ರೀರಾಮನ ವಂಶಸ್ಥರೇ ಹೊರತು ಬಾಬರನ ವಂಶಸ್ಥರಲ್ಲ, ಹೀಗಾಗಿ ಮುಸ್ಲಿಮರು ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಹಾಯ ಮಾಡಬೇಕು ಎಂದು ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಹೇಳಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕೆ ಒಂದು ವೇಳೆ ಮುಸ್ಲಿಮರು ನೆರವು ನೀಡದೆ ಇದ್ದರೆ ನನಗೆ ದುಃಖವಾಗುತ್ತದೆ. ಏಕೆಂದರೆ ಮುಸ್ಲಿಮರು ಕೂಡ ಶ್ರೀರಾಮನ ವಂಶದಿಂದಲೇ ಬಂದವರು. ಅವರು ಬಾಬರ್ ಅಥವಾ ಆತನ ವಂಶದಿಂದ ಬಂದವರಲ್ಲ ಎಂದಿದ್ದಾರೆ. ಹಿಂದೂಗಳು ತಾಳ್ಮೆ ಕಳೆದುಕೊಂಡರೆ ಅವರು ಮಥುರಾ, ಅಯೋಧ್ಯಾ ಮತ್ತು ಕಾಶಿಯನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲಿದ್ದಾರೆ ಎಂದೂ ಗಿರಿರಾಜ್ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ಹಾಗೂ ಅದರ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಶಿವನನ್ನು ಪೂಜಿಸುವ ಮತ್ತು ಹರ ಹರ ಮಹದೇವ ಎಂದು ಜಪಿಸುವ ಪಕ್ಷದ ಕಾರ್ಯಕರ್ತರನ್ನು ವಜಾಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು. ನೀವು ನಿಜವಾದ ಹಿಂದೂವೇ ಆಗಿದ್ದರೆ, ನಿಮ್ಮ ಸಂತೋಷ ಕೂಟಗಳಲ್ಲಿ ಗೋಮಾಂಸ ತಿನ್ನುವುದನ್ನು ನಿಲ್ಲಿಸಿ ಮತ್ತು ಚುನಾವಣೆ ಸಮೀಪಿಸಿದಾಗ ಮಾತ್ರ ದೇವಸ್ಥಾನಗಳಿಗೆ ಭೇಟಿ ಕೊಡುವುದನ್ನು ನಿಲ್ಲಿಸಿ ಎಂದು ರಾಹುಲ್ ಗಾಂಧಿಗೆ ಸವಾಲು ಹಾಕಿದರು.

ನಮ್ಮ ತಂಡ ಹೆಚ್ಚು ಬಲವಾಗಿದೆ. ನಾವು ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇವೆ. ಆದರೆ, ನಮ್ಮ ಶಿಯಾ ಸಹೋದರರು ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲ ನೀಡಿದಂತೆ ಇತರೆ ಮುಸ್ಲಿಮರು ಕೂಡ ಬೆಂಬಲ ನೋಡಬೇಕು. ತಮ್ಮ ಹಠಮಾರಿತನವನ್ನು ಅವರು ಬಿಡಬೇಕು. ಏಕೆಂದರೆ ನಾವಿಬ್ಬರೂ ಹಿಂದೂ ವಂಶಸ್ಥರೇ ಎಂದು ಗಿರಿರಾಜ್ ಹೇಳಿದ್ದರು.

ಗಿರಿರಾಜ್ ಸಿಂಗ್ ಅವರು ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆಯೂ ಅವರು ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಮರು ಬೆಂಬಲ ನೀಡಬೇಕು ಎಂದು ಆಗ್ರಹಿಸಿದ್ದರು. (ಎನ್.ಬಿ)

Leave a Reply

comments

Related Articles

error: