ಪ್ರಮುಖ ಸುದ್ದಿ

ನಿರುದ್ಯೋಗಿ ಯುವಕ ಯುವತಿಯರ ಓಲೈಕೆಗೆ ಮುಂದಾಗಿದ್ದಾರಂತೆ ಸಂಸದ ಧೃವನಾರಾಯಣ್ : ಉದ್ಯೋಗ ಮೇಳದ ಹೆಸರಿನಲ್ಲಿ ಕಾಂಗ್ರೆಸ್ ರಾಜಕೀಯ

ರಾಜ್ಯ(ಚಾಮರಾಜನಗರ)ಅ.2:-  ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿ ಉದ್ಯೋಗ ಮೇಳದ ಹೆಸರಿನಲ್ಲಿ ಕಾಂಗ್ರೆಸ್ ರಾಜಕೀಯ ನಡೆಸುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತದಾರ ಹಾಗೂ ನಿರುದ್ಯೋಗಿ ಯುವಕ ಯುವತಿಯರ ಓಲೈಕೆಗೆ ಕಾಂಗ್ರೆಸ್ ಪಕ್ಷ ಅದರಲ್ಲೂ ಭಾವಿ ಅಭ್ಯರ್ಥಿ ಹಾಲಿ ಸಂಸದ ಧ್ರುವನಾರಾಯಣ್ ಮುಂದಾಗಿದ್ದಾರೆ ಎನ್ನಲಾಗಿದೆ. ಇವರು ಸಂಸದರಾದ ಮೇಲೆ ಕಳೆದ ಐದು ವರ್ಷಗಳಿಂದ ಹಲವಾರು ಗಾಂಧಿ ಜಯಂತಿ ಗಳು ಹಾಗೂ ಅವರ ಜನ್ಮ ದಿನಾಚರಣೆ ಗಳು ನಡೆದಿದ್ದರೂ ಈ ಬಾರಿ ಮಾತ್ರ ಇಂತಹ ವಿಶೇಷ  ಕಾಳಜಿ ವಹಿಸಿರುವುದಕ್ಕೆ ಚುನಾವಣಾ ಗಿಮಿಕ್  ಕಾರಣ ಎಂದು ಹೇಳಲಾಗುತ್ತಿದೆ. ಈಗಾಗಲೇ ಸಂಸದರ ಹುಟ್ಟುಹಬ್ಬದ ಅಂಗವಾಗಿ ಚಾಮರಾಜನಗರ ಮತ್ತು ನಂಜನಗೂಡಿನಲ್ಲಿ ನಡೆಸಿದ ಉದ್ಯೋಗ ಮೇಳ ಯಶಸ್ಸು ಕಾಣದೆ ಹಳ್ಳ ಹಿಡಿದಿತ್ತು.

ಇಂತಹ ಉದ್ಯೋಗ ಮೇಳಗಳು ಪಕ್ಷಾತೀತವಾಗಿ ಅಥವಾ ಸರ್ಕಾರಿ ಕಾರ್ಯಕ್ರಮವಾಗಿ ಆಯೋಜನೆಗೊಂಡರೆ ಮಾತ್ರ ಅದು ಯಶಸ್ವಿಯಾಗುತ್ತದೆ. ಇವರು ಮಾತ್ರ ಕೇವಲ ಚುನಾವಣೆ ದೃಷ್ಟಿಯಿಂದ ಪಕ್ಷದ ಕಾರ್ಯಕ್ರಮದಂತೆ ಹಮ್ಮಿಕೊಂಡಿರುವ ಈ ಉದ್ಯೋಗ ಮೇಳ ಚರ್ಚೆಗೆ ಗ್ರಾಸವಾಗುತ್ತಿದೆ. ಕಾಂಗ್ರೆಸ್ ಪಕ್ಷದ ವತಿಯಿಂದ ನಡೆಯುವ ಈ ಉದ್ಯೋಗ ಮೇಳಕ್ಕೆ ಪ್ರತಿಪಕ್ಷಗಳು ಯಾವುದೇ ಕಾರಣಕ್ಕೂ ಸ್ಪಂದಿಸುವುದಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯ.

ಈಗಾಗಲೇ ಸಂಸದರು ನಾರಾಯಣ್ ಅವರ ಸಂಬಂಧಿ ಹಾಗೂ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಇದರ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದು ಇದರ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಮುಖಂಡರ ಜೊತೆ ಸಂಸದರು ಪೂರ್ವಭಾವಿ ಸಭೆ ನಡೆಸಿ ಮೇಳವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ. ಉದ್ಯೋಗ ಮೇಳದ ಉದ್ದೇಶ ಏನೇ ಇರಲಿ ಚುನಾವಣೆ ಗಿಮಿಕ್ ಆಗದೆ ನಿರುದ್ಯೋಗಿಗಳಿಗೆ ಸಹಾಯವಾದರೆ ಸಾಕು ಎನ್ನುವ ಮಾತು ಕೇಳಿ ಬರುತ್ತಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: