ಮನರಂಜನೆ

`ಸರಿಗಮಪ-15’ಕ್ಕೆ ಸ್ಪರ್ಧಿಯಾಗಿ ಬಂದ ಏಳು ತಿಂಗಳ ಗರ್ಭೀಣಿ.!

ಬೆಂಗಳೂರು,ಅ.2-ಕಳೆದ ಶನಿವಾರದಿಂದ ಜೀ ಕನ್ನಡ ವಾಹಿನಿಯ ಪ್ರಸಿದ್ಧ ಕಾರ್ಯಕ್ರಮ `ಸರಿಗಮಪ ಸೀಸನ್ 15’ ಶುರುವಾಗಿದೆ. ಕಳೆದ ವರ್ಷ ಕಾರ್ಯದಿಂದ ದೂರವುಳಿದಿದ್ದ ಗಾಯಕ ರಾಜೇಶ್ ಕೃಷ್ಣನ್ ಕಾರ್ಯಕ್ರಮಕ್ಕೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಕಾರ್ಯಕ್ರಮದ ಆಡಿಷನ್ ನಲ್ಲಿ ಅಪರೂಪದ ಹಾಗೂ ವಿಶೇಷ ಘಟನೆಯೊಂದು ನಡೆದಿದೆ.

ಹೌದು, ಮೆಗಾ ಆಡಿಷನ್ ನಲ್ಲಿ 7 ತಿಂಗಳ ಗರ್ಭಿಣಿಯೊಬ್ಬರು ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಇದು ಸರಿಗಮಪ ಇತಿಹಾಸದಲ್ಲಿ ಇದೇ ಮೊದಲು. ಆ ಹೆಣ್ಣು ಮಗಳ ಉತ್ಸಾಹ ನೋಡಿ ಸರಿಗಮಪ ತಂಡ ಬೆರಗಾಗಿದೆ.

ಸಂಧ್ಯಾ ಎಂಬ ಏಳು ತಿಂಗಳ ಗರ್ಭಿಣಿ ಕಾರ್ಯಕ್ರಮದ ಸ್ಪರ್ಧಿಯಾಗಿ ಹಾಡಿದ್ದಾರೆ. ಮೊದಲ ಆಡಿಷನ್ ನಲ್ಲಿ ಆಯ್ಕೆ ಆಗಿದ್ದ ಇರುವ ಮೆಗಾ ಆಡಿಷನ್ ನ 12ನೇ ಸ್ಪರ್ಧಿ ಆಗಿದ್ದರು. ಕಾರ್ಯಕ್ರಮದಲ್ಲಿ ಅವರ ಪತಿ ವಿಷ್ಣು ಕೂಡ ಪತ್ನಿಗೆ ಸಾಥ್ ನೀಡಿದರು.

ಸಂಧ್ಯಾ ‘ನಮ್ಮೂರ ಮಂದಾರ ಹೂವೆ’ ಸಿನಿಮಾದ ‘ಓಂಕಾರದಿ…’ ಹಾಡನ್ನು ಹಾಡಿದರು. ನಂತರ ಈ ತುಂಬು ಗರ್ಭಿಣಿಗೆ ಜೀ ಕನ್ನಡ ವತಿಯಿಂದ ಸೀಮಂತ ಮಾಡಲಾಯಿತು. ಮುತ್ತೈದೆಯರು ಬಂದು ಆರತಿ ಎತ್ತಿ ಆಶೀರ್ವಾದ ಮಾಡಿದರು.

ಸಂಧ್ಯಾ ಅವರ ಹಾಡು ಕೇಳಿ ಖುಷಿಯಾದ ಮಹಾಗುರುಗಳಾದ ಹಂಸಲೇಖ ಅವರು, ಸರಿಗಮಪದ ಎಲ್ಲ ಸಂದರ್ಭವನ್ನು ನೋಡು, ಕೇಳು, ಆನಂದಪಡು. ಅದನ್ನು ನಿನ್ನ ಮಗುವಿಗೆ ಧಾರೆ ಏರಿ. ದೇವಭಾಷೆಯನ್ನು ಅನುವಾದಿಸಿ ಕರ್ನಾಟಕಕ್ಕೆ ಕೊಡು. ಆಲ್ ದಿ ಬೆಸ್ಟ್. ಅಂದು ಮನಸ್ಸು ತುಂಬಿ ಹಾರೈಸಿದರು.

ರಾಜೇಶ್ ಕೃಷ್ಣನ್, ನಿಮ್ಮ ಹಾಡು ಕೇಳಿ ನನಗೆ ನಮ್ಮ ತಾಯಿ ನೆನಪಾದರು. ನಾನು ನಮ್ಮ ತಾಯಿಯ ಹೊಟ್ಟೆಯಲ್ಲಿ ಇದ್ದಾಗ ಎಂಟು ತಿಂಗಳವರೆಗೆ ಅವರು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದರು. ಆ ನೆನಪು ನನಗೆ ಚಿಕ್ಕದಾಗಿ ಮೂಡುವಂತೆ ಮಾಡಿದ್ದೀರ. ನಿಮ್ಮ ಉತ್ಸಾಹವನ್ನು ಮೆಚ್ಚಬೇಕು ಎಂದರು.

ವಿಜಯ್ ಪ್ರಕಾಶ್, ಗಾಯನದ ದೃಷ್ಟಿಯಿಂದ ನೋಡಿದಾಗ ಇನ್ನು ಸ್ವಲ್ಪ ಸಾಧನೆ ಬೇಕು ಅಂತ ಅನಿಸಿತು. ಆದರೆ, ಸದ್ಯ ಹಾಡಿಗಿಂತ ಬಹು ಮುಖ್ಯವಾದ ಕೆಲಸವನ್ನು ಭಗವಂತ ನಿಮಗೆ ನೀಡಿದ್ದಾನೆ. ನಿಮಗೆ ಆಯಸ್ಸು, ಆರೋಗ್ಯ ಎಲ್ಲವನ್ನು ದೇವರು ನೀಡಲಿ ಅಂತ ಕೇಳಿಕೊಳ್ಳುತ್ತೇನೆ ಎಂದರು.

ಅರ್ಜುನ್ ಜನ್ಯ, ನಿಮ್ಮ ಜೊತೆಗೆ ನಿಮ್ಮ ಮಗು ಕೂಡ ವೇದಿಕೆ ಮೇಲೆ ಬಂದಿರುವುದು ತುಂಬ ದೊಡ್ಡ ವಿಷಯ. ನೀವು ಸಂತೋಷವಾಗಿ ಇರಿ. ಖುಷಿಯಾಗಿ ಇರಿ. ನಿಮ್ಮ ಆಸೆ ಈಗ ಈಡೇರಿದೆ ಎಂದುಕೊಂಡಿದ್ದೇವೆ. ನಿಮಗೆ ಒಳ್ಳೆದಾಗಲಿ  ಎಂದು ಶುಭ ಹಾರೈಸಿದರು.

ಆದರೆ ಸಂಧ್ಯಾ ಅವರು ಆಯ್ಕೆಯಾಗಲಿಲ್ಲ. ಆದರೆ, ಗರ್ಭಿಣಿ ಆಗಿದ್ದರೂ ಅವರು ಇಲ್ಲಿಯವರೆಗೆ ಬಂದು ಹಾಡಿದ್ದು, ಅದಕ್ಕಿಂತ ದೊಡ್ಡ ವಿಚಾರ. ಈ ವೇದಿಕೆಯಲ್ಲಿ ಪತ್ನಿಯ ಸೀಮಂತ ಮಾಡಿದಕ್ಕೆ ವಿಷ್ಣು ಸಂತಸ ವ್ಯಕ್ತಪಡಿಸಿದರು. (ಎಂ.ಎನ್)

Leave a Reply

comments

Related Articles

error: