ಕರ್ನಾಟಕಪ್ರಮುಖ ಸುದ್ದಿ

ಆಪರೇಷನ್ ಕಮಲ: ‘ಕಿಂಗ್ ಪಿನ್’ ಆರೋಪಿಗೆ ಲುಕ್‌ಔಟ್ ನೋಟಿಸ್

ಬೆಂಗಳೂರು (ಅ.2): ಆಪರೇಷನ್ ಕಮಲ ಪ್ರಕರಣದ ಕಿಂಗ್ ಪಿನ್ ಎಂಬ ಆರೋಪ ಹೊತ್ತಿರುವ ಉದಯ್ ಗೌಡ ಬಂಧನಕ್ಕೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಲುಕ್‌ ಔಟ್ ನೋಟಿಸ್ ಹೊರಡಿಸಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಬಿಜೆಪಿಗೆ ಸೆಳೆಯಲು ಹಣದ ಆಮಿಷ ಒಡ್ಡುವ ಚಟುವಟಿಕೆಯಲ್ಲಿ ಉದಯ್ ಗೌಡ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ದೂರು ನೀಡಲಾಗಿತ್ತು. ಸಕಲೇಶಪುರದ ಶಾಸಕ ಎಚ್‌.ಕೆ. ಕುಮಾರಸ್ವಾಮಿ ಅವರನ್ನು ಬಿಜೆಪಿಗೆ ಸೇರ್ಪಡೆಯಾಗುವಂತೆ ಅವರ ಪತ್ನಿ ಮೂಲಕ ಮನವೊಲಿಸುವ ಕಾರ್ಯಕ್ಕೆ ಉದಯ್ ಗೌಡ ಮುಂದಾಗಿದ್ದರು ಎಂದು ಸಹ ಆರೋಪಿಸಲಾಗಿದೆ.

ತಮ್ಮ ವಿರುದ್ಧ ದೂರು ದಾಖಲಾಗುತ್ತಿದ್ದಂತೆಯೇ ಉದಯ್ ಗೌಡ ನಾಪತ್ತೆಯಾಗಿದ್ದು, ಶ್ರೀಲಂಕಾದಲ್ಲಿ ತಲೆಮರೆಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಅವರ ಪತ್ತೆಗೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಲುಕ್‌ ಔಟ್ ಜಾರಿ ಮಾಡಿದ್ದಾರೆ. ಪೊಲೀಸರಿಗೆ ಬೇಕಾಗಿರುವ ವ್ಯಕ್ತಿ ಯಾವುದೇ ಕಡೆ ಪ್ರಯಾಣ ಮಾಡುತ್ತಿರುವುದು ಕಂಡುಬಂದರೆ ಮಾಹಿತಿ ನೀಡಲು ಲುಕ್‌ಔಟ್ ನೋಟಿಸ್ ಹೊರಡಿಸಲಾಗುತ್ತದೆ.

ಆಪರೇಷನಲ್ ಕಮಲದಲ್ಲಿ ಭಾಗಿಯಾಗಿರುವ ಕಿಂಗ್‌ ಪಿನ್‌ಗಳು ಯಾರೆಂದು ತಮಗೆ ಗೊತ್ತು ಎಂದು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದು ರಾಜ್ಯದಾದ್ಯಂತ ತೀವ್ರ ಸಂಚಲನ ಉಂಟುಮಾಡಿತ್ತು.  ಅದರ ಬೆನ್ನಲ್ಲೇ ಉದಯ್ ಗೌಡ ಅವರಿಗೆ ಸೇರಿದ ಕ್ಲಬ್ ಒಂದರ ಮೇಲೆ ಕೇಂದ್ರ ಅಪರಾಧ ವಿಭಾಗದ ಪೊಲೀಸರು ದಾಳಿ ನಡೆಸಿದ್ದರು. ಎಂಜಿ ರಸ್ತೆಯಲ್ಲಿರುವ ಈ ಕ್ಲಬ್‌ಅನ್ನು ಕಾನೂನು ಬಾಹಿರವಾಗಿ ನಡೆಸಲಾಗುತ್ತಿದೆ ಎಂದು ಕ್ಲಬ್‌ಗೆ ಬೀಗ ಹಾಕಲಾಗಿದೆ. (ಎನ್.ಬಿ)

Leave a Reply

comments

Related Articles

error: