ಪ್ರಮುಖ ಸುದ್ದಿಮೈಸೂರು

ಅರ್ಜುನನಿಗೆ ಮರದ ಅಂಬಾರಿ ಕಟ್ಟಿ ತಾಲೀಮು : ನಮ್ಮನ್ನು ಕ್ಯಾಮರಾದಿಂದ ಶೂಟ್ ಮಾಡಿ ಬಂದೂಕಿನಿಂದಲ್ಲ ಜಾಗೃತಿ ಮೂಡಿಸಿದ ಗಜಪಡೆ

ಮೈಸೂರು,ಅ.3:- ನಾಡ ಹಬ್ಬ ದಸರಾ ಉತ್ಸವದ ಜಂಬೂಸವಾರಿ ಮೆರವಣಿಗೆಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಗಜಪಡೆ ತಾಲೀಮು ಚುರುಕುಗೊಂಡಿದ್ದು ಇಂದು ಅರ್ಜುನನಿಗೆ ಮರದ ಅಂಬಾರಿ ಕಟ್ಟಿ ತಾಲೀಮು ನಡೆಸಲಾಯಿತು.

ಇಷ್ಟುದಿನ ಮರಳಿನ ಮೂಟೆ ಹೊರಿಸಿ ತಾಲೀಮು ನಡೆಸಿದ ಅರ್ಜುನ ಆನೆಗೆ ಇಂದು 280 ಕೆ.ಜಿ ತೂಕದ ಮರದ ಅಂಬಾರಿ ಸೇರಿದಂತೆ ಒಟ್ಟು 650 ಕೆ.ಜಿ ಭಾರ ಹೊರಿಸಿ ತಾಲೀಮು ನಡೆಸಲಾಯಿತು.

ಮರದ ಅಂಬಾರಿಯನ್ನು ಹೊತ್ತು ಸಾಗಿದ ಅರ್ಜುನನಿಗೆ ಕುಮ್ಮಿ ಆನೆಗಳಾದ ಚೈತ್ರಾ, ಕಾವೇರಿ, ವಿಜಯ ಸೇರಿದಂತೆ ಇತರ ಆನೆಗಳು ಸಾಥ್ ನೀಡಿದವು.

ಅರಮನೆಯ ಆವರಣದಲ್ಲಿರುವ ಕ್ರೇನ್ ಸಹಾಯದಿಂದ ಮರಳಿನ ಮೂಟೆ ಮತ್ತು ಮರದ ಅಂಬಾರಿಯನ್ನು ಕಟ್ಟಿ ಆ ಬಳಿಕ ಜಂಬೂಸವಾರಿ ದಿನ ಅರಮನೆ ಮುಂಭಾಗ ನಡೆಯುವ ಪುಷ್ಪಾರ್ಚನೆ ಸೇರಿದಂತೆ ಹಲವು ತಾಲೀಮಿಗೆ ಅರ್ಜುನನನ್ನು ಒಗ್ಗಿಸುವ ಪ್ರಯತ್ನಗಳು ನಡೆದವು, ನಂತರ ಮರದ ಅಂಬಾರಿ ಹೊತ್ತ ಅರ್ಜುನ ಸೇರಿದಂತೆ ಒಟ್ಟು 12 ಆನೆಗಳು ಬಲರಾಮ ದ್ವಾರದಿಂದ ಹೊರಟು ರಾಜ ಮಾರ್ಗದಲ್ಲಿ ಸಾಗಿದವು.

ಬೆಳಿಗ್ಗೆ ಸುಮಾರು 8.30ಕ್ಕೆ ಅರಮನೆಯಿಂದ ಹೊರಟ ಕ್ಯಾಪ್ಟನ್ ಅರ್ಜುನ ಕೇವಲ ಒಂದು ಗಂಟೆ ಅವಧಿಯಲ್ಲಿಯೇ ಸರಾಗವಾಗಿ ಬನ್ನಿ ಮಂಟಪ ತಲುಪಿ ಬಳಿಕ ಅಲ್ಲಿಂದ ವಾಪಸ್ ಅರಮನೆಗೆ ಬಂದು ಯಶಸ್ವಿ ತಾಲೀಮು ನಡೆಸಿದ್ದಾನೆ.

ವನ್ಯ ಜೀವಿ ಸಪ್ತಾಹದ ಅಂಗವಾಗಿ ಅರ್ಜುನ ಆನೆಯನ್ನು ಹೊರತುಪಡಿಸಿ ಉಳಿದ 11 ಆನೆಗಳಿಗೆ ಅರಣ್ಯ ಮತ್ತು ವನ್ಯ ಜೀವಿ ಸಂರಕ್ಷಣೆ ಕುರಿತು ಜಾಗೃತಿ ಫಲಕ ತೂಗುಹಾಕಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಪ್ರಯತ್ನ ನಡೆಸಲಾಯಿತು. ನಮ್ಮನ್ನು ಕ್ಯಾಮರಾದಿಂದ ಶೂಟ್ ಮಾಡಿ ಬಂದೂಕಿನಿಂದಲ್ಲ. ಅರಣ್ಯೋ ರಕ್ಷತಿಃ ರಕ್ಷಿತಃ, ನಾವು ಅರಣ್ಯವನ್ನು ರಕ್ಷಿಸಿದರೆ ಅರಣ್ಯ ನಮ್ಮನ್ನು ರಕ್ಷಿಸುತ್ತದೆ. ವನ್ಯ ಜೀವಿಗಳನ್ನು ಬದುಕಲು ಬಿಡಿ ನಾವೂ ನಿಮ್ಮಂತೆ ಜೀವಿಗಳೇ, ವನ್ಯ ಪ್ರಾಣಿಗಳು ವನದೇವಿಯ ಆಭರಣಗಳಿದ್ದಂತೆ ಅವುಗಳನ್ನು ರಕ್ಷಿಸಿ ಎಂಬಿತ್ಯಾದಿ ಫಲಕಗಳುಗಜಗಳ ಮೈಮೇಲೆ ರಾರಾಜಿಸಿದವು.

ಡಿಸಿಎಫ್ ಸಿದ್ದರಾಮಪ್ಪ ಮಾತನಾಡಿ  ಅರ್ಜುನ ಆನೆಗೆ ಹಂತಹಂತವಾಗಿ ಭಾರ ಹೊರಿಸುವ ತಾಲೀಮು ನಡೆಸಲಾಗುತ್ತಿದೆ. ಅದರ ಮುಂದುವರೆದ ಭಾಗವಾಗಿ ಇಂದು ಮರದ ಅಂಬಾರಿ ಕಟ್ಟಿ ಅರ್ಜುನನ ಸಾಮರ್ಥ್ಯ ಪರೀಕ್ಷೆ ಮಾಡಲಾಗುತ್ತಿದೆ ಎಂದರು.

ಆನೆಗಳ ವೈದ್ಯ ಡಾ.ನಾಗರಾಜ್ ಮಾತನಾಡಿ ಇಂದು ಅರ್ಜುನನಿಗೆ ಮರದ ಅಂಬಾರಿ ಸೇರಿ ಒಟ್ಟು 650 ಕೆ.ಜಿ ಭಾರ ಹೊರಿಸಲಾಗುತ್ತಿದೆ. ಅರ್ಜುನನನ್ನು ಹೊರತುಪಡಿಸಿ ಧನಂಜಯ ಮತ್ತು ದ್ರೋಣ ಆನೆಗಳಿಗೂ ಭಾರಹೊರಿಸುವ ತಾಲೀಮು ನಡೆಸಲಾಗುವುದು ಎಂದರು.

ಗಜಪಡೆಗಳು ಗಾಂಭೀರ್ಯದ ಹೆಜ್ಜೆಯಿಟ್ಟು ಬನ್ನಿಮಂಟಪದವರೆಗೆ ತೆರಳುವುದನ್ನು ಸಾರ್ವಜನಿಕರು ಕಣ್ತುಂಬಿಸಿಕೊಂಡರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: