ಕರ್ನಾಟಕಪ್ರಮುಖ ಸುದ್ದಿ

ಲೋಕಸಭೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ: ಎಂಟರಲ್ಲಿ ಆರು ಕ್ಷೇತ್ರಗಳು ಕಗ್ಗಂಟು!?

ಬೆಂಗಳೂರು (ಅ.10): ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಜೆಡಿಎಸ್‍ ವರಿಷ್ಠ ದೇವೇಗೌಡರು ಹತ್ತು ಸೀಟು ಬೇಕು ಎನ್ನುವ ಪಟ್ಟು ಸಡಿಲಿಸದ್ದು,  ಎಂಟು ಸೀಟುಗಳಿಗೆ ಸಮಾಧಾನಪಟ್ಟಿದ್ದಾರೆ ಎನ್ನಲಾಗಿದೆ. ಆದರೆ ಈ ಎಂಟರಲ್ಲಿಯೂ ಆರು ಕ್ಷೇತ್ರಗಳ ಸೀಟು ಹಂಚಿಕೆ ಕಗ್ಗಂಟಾಗಿ ಪರಿಣಮಿಸಿದೆ ಎನ್ನಲಾಗಿದೆ!

ನಮಗೆ ಹತ್ತು ಎನ್ನುತ್ತಿದ್ದ ಜೆಡಿಎಸ್ ಈಗ ಎಂಟು ಸ್ಥಾನ ಸಾಕು ಎನ್ನುವ ಲೆಕ್ಕಾಚಾರದಲ್ಲಿದ್ದಾರಂತೆ. ಆದರೆ, ಜೆಡಿಎಸ್ ಕೇಳುತ್ತಿರುವ ಎಂಟು ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿಗೆ ತೀವ್ರ ಸಮಸ್ಯೆಯಾಗುತ್ತಿರುವುದು ಆರು ಕ್ಷೇತ್ರಗಳಲ್ಲಿ. ಯಾಕೆಂದರೆ, ಆರು ಕ್ಷೇತ್ರಗಳಲ್ಲಿ ಜೆಡಿಎಸ್ ಎಷ್ಟು ಪ್ರಾಬಲ್ಯವನ್ನು ಹೊಂದಿದೆಯೋ ಅಷ್ಟೇ ಹಿಡಿತವನ್ನೂ ಕಾಂಗ್ರೆಸ್ ಕೂಡಾ ಹೊಂದಿದೆ.

ಇಷ್ಟೇ ಅಲ್ಲದೆ ಮುಂಬರುವ ಚುನಾವಣೆಯಲ್ಲಿ ಯಾರಿಗೆ ಎಷ್ಟು ಸೀಟು ಎನ್ನುವ ಮಾತುಕತೆಯನ್ನು ಗೌಡ್ರು, ಕಾಂಗ್ರೆಸ್ಸಿನ ಹೈಕಮಾಂಡ್ ಮಟ್ಟದಲ್ಲೇ ಮಾತನಾಡುತ್ತಿರುವುದು ರಾಜ್ಯ ಕಾಂಗ್ರೆಸ್ ಮುಖಂಡರಿಗೆ ಇರಿಸುಮುರಿಸು ಉಂಟುಮಾಡಿದೆಯಂತೆ.

ಜೆಡಿಎಸ್ ಕೇಳಿರುವ 8 ಕ್ಷೇತ್ರಗಳಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಎರಡು ಜೆಡಿಎಸ್, ಮೂರು ಕಾಂಗ್ರೆಸ್ ಮತ್ತು ಒಂದು ಸ್ಥಾನವನ್ನು ಬಿಜೆಪಿ ಗೆದ್ದಿತ್ತು. ಜೊತೆಗೆ, ಒಂದು ವೇಳೆ ಮೈತ್ರಿ ಮುರಿದುಬಿದ್ದರೆ, ಈ ಆರು ಕ್ಷೇತ್ರಗಳಲ್ಲಿ ನಾಲ್ಕರಲ್ಲಿ ತ್ರಿಕೋಣ ಸ್ಪರ್ಧೆ ಏರ್ಪಡುವುದು ಖಚಿತ ಎನ್ನುವಂತಾಗಿದೆ.

ಕಾಂಗ್ರೆಸ್ ಹೈಕಮಾಂಡ್ ಚಿತ್ತ ಏನಿದ್ದರೂ ನಾಲ್ಕು ರಾಜ್ಯಗಳ ಚುನಾವಣೆಯ ಮೇಲೆ ನೆಟ್ಟಿರುವುದರಿಂದ, ವರ್ಷಾಂತ್ಯದಲ್ಲಿ ಅಥವಾ ಹೊಸವರ್ಷದ ಆದಿಯಲ್ಲಿ ಮೈತ್ರಿಯ ಬಗ್ಗೆ ಅಂತಿಮ ಮಾಹಿತಿ ಹೊರ ಬೀಳಬಹುದು. ಸದ್ಯದ ಮಾಹಿತಿಯ ಪ್ರಕಾರ, ಜೆಡಿಎಸ್ ಕೇಳುತ್ತಿರುವ ಮಾಡುತ್ತಿರುವ ಎಂಟು ಕ್ಷೇತ್ರಗಳಲ್ಲಿ, ಕಾಂಗ್ರೆಸ್ಸಿಗೆ ತಲೆನೋವಾಗಿರುವ ಆರು ಕ್ಷೇತ್ರಗಳು ಇವು.

ಮಂಡ್ಯ :

ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಂಟು ಅಸೆಂಬ್ಲಿ ಕ್ಷೇತ್ರಗಳಿವೆ. ಮಳವಳ್ಳಿ, ಮದ್ದೂರು, ಮೇಲುಕೋಟೆ, ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ, ಕೃಷ್ಣರಾಜಪೇಟೆ, ಕೃಷ್ಣರಾಜನಗರ. ಈ ಎಲ್ಲಾ ಕ್ಷೇತ್ರಗಳಲ್ಲಿ ಇತ್ತೀಚೆಗೆ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್ ಜಯ ಸಾಧಿಸಿತ್ತು. ಹಾಗಾಗಿ, ಸಹಜವಾಗಿಯೇ, ಜೆಡಿಎಸ್ ಈ ಕ್ಷೇತ್ರವನ್ನು ಬಿಟ್ಟುಕೊಡಲು ಕೇಳುತ್ತಿದೆ.

ಆದರೆ, ಕಾಂಗ್ರೆಸ್ ಈ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯವನ್ನು ಹೊಂದಿದೆ. ಒಪ್ಪಿಗೆ ನೀಡಿದರೆ ಅಂಬರೀಶ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎನ್ನುವ ಸುದ್ದಿಯಿದೆ. ಇನ್ನು ಜೆಡಿಎಸ್‍ನಿಂದ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಹೆಸರು ಮಂಚೂಣಿಯಲ್ಲಿದ್ದರೂ, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ಪುತ್ರನ ಹೆಸರು ಮತ್ತು ನಿಖಿಲ್ ಕುಮಾರಸ್ವಾಮಿ ಕೇಳಿಬರುತ್ತಿದೆ.

ಬೆಂಗಳೂರು ಉತ್ತರ :

ಜೆಡಿಎಸ್ ಡಿಮಾಂಡ್ ಮಾಡುತ್ತಿರುವ ಇನ್ನೊಂದು ಕ್ಷೇತ್ರವೆಂದರೆ ಅದು ಬೆಂಗಳೂರು ಉತ್ತರ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಸದಾನಂದ ಗೌಡರು ಜಯಗಳಿಸಿದ್ದರು. ಆದರೆ ಈ ಬಾರಿ ಇಲ್ಲಿ ಅಷ್ಟು ಅನುಕೂಲಕರ ಪರಿಸ್ಥಿತಿ ಬಿಜೆಪಿಗೆ ಇಲ್ಲ ಎನ್ನುವ ಮಾಹಿತಿಯಿದೆ. ಹಾಗಾಗಿ ಸದಾನಂದಗೌಡ್ರು ಉಡುಪಿ-ಚಿಕ್ಕಮಗಳೂರು ಕ್ಷೇತ್ರದತ್ತ ಕಣ್ಣಿಟ್ಟಿದ್ದಾರೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂಟು ಅಸೆಂಬ್ಲಿ ಸೀಟುಗಳೆಂದರೆ, ಕೆ.ಆರ್.ಪುರಂ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹಾಲಕ್ಷ್ಮೀ ಲೇಔಟ್, ಮಲ್ಲೇಶ್ವರಂ, ಹೆಬ್ಬಾಳ ಮತ್ತು ಪುಲಿಕೇಶಿ ನಗರ. ಇದರಲ್ಲಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್, ಎರಡರಲ್ಲಿ ಜೆಡಿಎಸ್ ಮತ್ತು ಬಿಜೆಪಿ ಒಂದು ಕ್ಷೇತ್ರದಲ್ಲಿ ಗೆದ್ದಿದೆ. ಎರಡು ಕ್ಷೇತ್ರಗಳಲ್ಲಿ ಗೆದ್ದಿರುವುದು ಒಂದೆಡೆ, ಜೊತೆಗೆ ಯಶವಂತಪುರದಲ್ಲಿ ಎರಡನೇ ಸ್ಥಾನದಲ್ಲಿ ಇದ್ದಿದ್ದರಿಂದ, ಜೆಡಿಎಸ್ ಈ ಕ್ಷೇತ್ರವನ್ನು ಡಿಮಾಂಡ್ ಮಾಡುತ್ತಿದೆ ಎನ್ನುವ ಮಾಹಿತಿಯಿದೆ.

ಚಿಕ್ಕಬಳ್ಳಾಪುರ :

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ವೀರಪ್ಪ ಮೊಯ್ಲಿ ಗೆದ್ದಿದ್ದರು. ಬಿಜೆಪಿಯ ಬಿ ಎನ್ ಬಚ್ಚೇಗೌಡರನ್ನು ಸೋಲಿಸಬೇಕು ಎನ್ನುವ ಉದ್ದೇಶದಿಂದ ಕುಮಾರಸ್ವಾಮಿ, ಜೆಡಿಎಸ್ ನಿಂದ ಕಣಕ್ಕಿಳಿದಿದ್ದರು. ಹಾಗಾಗಿ, ಮೊಯ್ಲಿ ಈ ಕ್ಷೇತ್ರದಿಂದ ಗೆದ್ದಿದ್ದರು. ಈ ಬಾರಿ ಅಲ್ಲಿಂದಲೇ ಸ್ಪರ್ಧಿಸಲು ತಯಾರಿ ಮಾಡಿಕೊಂಡಿದ್ದೇನೆ ಎಂದು ಮೊಯ್ಲಿ ಹೇಳಿಕೆ ನೀಡಿದ್ದಾಗಿದೆ.

ಆದರೆ, ಜೆಡಿಎಸ್ ಈ ಕ್ಷೇತ್ರವನ್ನು ತಮಗೆ ಬಿಟ್ಟುಕೊಡುವಂತೆ ಡಿಮಾಂಡ್ ಮಾಡುತ್ತಿದೆ ಎನ್ನುವ ಮಾಹಿತಿಯಿದೆ. ಈ ಕ್ಷೇತ್ರದಲ್ಲಿ ಬರುವ ಎಂಟು ವಿಧಾನಸಭಾ ಕ್ಷೇತ್ರಗಳೆಂದರೆ, ಗೌರಿಬಿದನೂರು, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಯಲಹಂಕ, ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ ಮತ್ತು ನೆಲಮಂಗಲ. ಇದರಲ್ಲಿ, ಕಾಂಗ್ರೆಸ್ ಐದರಲ್ಲಿ, ಜೆಡಿಎಸ್ ಎರಡು ಮತ್ತು ಬಿಜೆಪಿ ಒಂದು ಕ್ಷೇತ್ರದಲ್ಲಿ ಜಯಗಳಿಸಿತ್ತು. ಆದರೆ, ಕ್ಷೇತ್ರದ ಎಲ್ಲಾ ಅಸೆಂಬ್ಲಿ ಸೀಟುಗಳಲ್ಲಿ ಜೆಡಿಎಸ್ ಅಸ್ತಿತ್ವ ಹೊಂದಿರುವುದರಿಂದ, ಈ ಲೋಕಸಭಾ ಕ್ಷೇತ್ರವನ್ನು ತಮಗೆ ನೀಡಬೇಕು ಎನ್ನುವ ಡಿಮಾಂಡ್ ಅನ್ನು ಜೆಡಿಎಸ್ ಮಾಡುತ್ತಿದೆ.

ಬೆಂಗಳೂರು ಗ್ರಾಮಾಂತರ:

ಜೆಡಿಎಸ್ ಡಿಮಾಂಡ್ ಮಾಡುತ್ತಿರುವ ಇನ್ನೊಂದು ಕ್ಷೇತ್ರ ಬೆಂಗಳೂರು ಗ್ರಾಮಾಂತರ, ಇದು ಡಿ.ಕೆ. ಸುರೇಶ್ ಅವರು ಸತತವಾಗಿ ಗೆದ್ದು ಬಂದಿರುವ ಸೀಟು. ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅಸೆಂಬ್ಲಿ ಕ್ಷೇತ್ರಗಳೆಂದರೆ, ರಾಜರಾಜೇಶ್ವರಿ ನಗರ, ಕುಣಿಗಲ್, ಬೆಂಗಳೂರು ದಕ್ಷಿಣ, ಆನೇಕಲ್, ಮಾಗಡಿ, ರಾಮನಗರ, ಕನಕಪುರ ಮತ್ತು ಚನ್ನಪಟ್ಟಣ. ಇದರಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್, ಮೂರರಲ್ಲಿ ಜೆಡಿಎಸ್ ಮತ್ತು ಒಂದರಲ್ಲಿ ಬಿಜೆಪಿ ಗೆದ್ದಿತ್ತು. ಎಲ್ಲಾ ಕ್ಷೇತ್ರಗಳಲ್ಲಿ ಜೆಡಿಎಸ್ ತನ್ನ ಹಿಡಿತವನ್ನು ಹೊಂದಿದೆ, ಹಾಗಾಗಿ ಈ ಸೀಟ್ ಮೇಲೆ ಜೆಡಿಎಸ್ ಕಣ್ಣು.

ಕೋಲಾರ:

ಸೋಲಿಲ್ಲದ ಸರದಾರನಂತೆ ಗೆದ್ದು ಬರುತ್ತಿರುವ ಕೆ ಎಚ್ ಮುನಿಯಪ್ಪ ಅವರು ಪ್ರತಿನಿಧಿಸುತ್ತಿರುವ ಕ್ಷೇತ್ರ ಕೋಲಾರ. ಈ ಕ್ಷೇತ್ರದ ಮೇಲೆ ಜೆಡಿಎಸ್ ಕಣ್ಣುನೆಟ್ಟಿದೆ. ಆದರೆ, ಈಗಾಗಲೇ ಈ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಮುನಿಯಪ್ಪ ಘೋಷಿಸಿದ್ದಾರೆ. ತಾವು ಬಯಸಿದ್ದನ್ನು ಹೈಕಮಾಂಡ್ ಲೆವೆಲ್‍ನಲ್ಲಿ ಸಾಧಿಸುವಲ್ಲಿ ಯಶಸ್ವಿಯಾಗುತ್ತಿರುವ ಮುನಿಯಪ್ಪ, ಈ ಕ್ಷೇತ್ರದಲ್ಲಿ ಹೊಂದಾಣಿಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಕೋಲಾರ ವ್ಯಾಪ್ತಿಯಲ್ಲಿ ಬರುವ ಅಸೆಂಬ್ಲಿ ಕ್ಷೇತ್ರಗಳು, ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ, ಮುಳಬಾಗಿಲು, ಕೆಜಿಎಫ್, ಬಂಗಾರಪೇಟೆ, ಕೋಲಾರ ಮತ್ತು ಮಾಲೂರು. ಇದರಲ್ಲಿ ನಾಲ್ಕರಲ್ಲಿ ಕಾಂಗ್ರೆಸ್, ಎರಡರಲ್ಲಿ ಜೆಡಿಎಸ್ ಮತ್ತು ಒಬ್ಬರು ಪಕ್ಷೇತರ ಅಭ್ಯರ್ಥಿ ಗೆದ್ದಿದ್ದರು.

ಹಾಸನ :

ಜೆಡಿಎಸ್ ವರಿಷ್ಠ ದೇವೇಗೌಡರು ಪ್ರತಿನಿಧಿಸುತ್ತಿರುವ ಹಾಸನ ಕ್ಷೇತ್ರದ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿರುವುದು ಗೌಡ್ರಿಗೆ ಮುಜುಗರಕ್ಕೀಡುಮಾಡಿದೆ ಎನ್ನಲಾಗುತ್ತಿದೆ. ಹಾಸನದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನೇರ ಹಣಾಹಣಿಯಿದ್ದರೂ, ಬಿಜೆಪಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎರಡರಲ್ಲಿ ಗೆದ್ದಿರುವುದರಿಂದ, ಈ ಬಾರಿ ತೀವ್ರ ಪೈಪೋಟಿ ಎದುರಾಗುವ ಸಾಧ್ಯತೆಯಿದೆ.

ಕಾಂಗ್ರೆಸ್ಸಿನ ಎ ಮಂಜು ಅವರಿಗೆ ಗೌಡ್ರ ಕುಟುಂಬದ ಜೊತೆಗೆ ಹೊಂದಾಣಿಕೆ ಇಲ್ಲದೇ ಇರುವುದರಿಂದ, ಮೈತ್ರಿಗೆ ಅಪಸ್ವರ ಕೇಳಿಬರುತ್ತಿದೆ. ಹಾಸನ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ, ಕಡೂರು, ಶ್ರವಣಬೆಳಗೊಳ, ಅರಸೀಕೆರೆ, ಬೇಲೂರು, ಹಾಸನ, ಹೊಳೇನರಸೀಪುರ, ಅರಕಲಗೂಡು ಮತ್ತು ಸಕಲೇಶಪುರ ಕ್ಷೇತ್ರಗಳಲ್ಲಿ ಜೆಡಿಎಸ್ ಆರು ಮತ್ತು ಬಿಜೆಪಿ ಎರಡು ಸ್ಥಾನದಲ್ಲಿ ಗೆದ್ದಿದೆ. (ಎನ್.ಬಿ)

Leave a Reply

comments

Related Articles

error: