ಮೈಸೂರು

ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಸದೇ ಇರುವವರ ವಿರುದ್ಧ ವಿಶೇಷ ಕಾರ್ಯಾಚರಣೆ: ದಂಡ ಪಾವತಿಸದ ವಾಹನಗಳು ಪೊಲೀಸ್ ವಶಕ್ಕೆ

ಮೈಸೂರು,ಅ.4:- ಮೈಸೂರು ನಗರದಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಸಂಬಂಧ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿ ವಾಹನ ಸವಾರರಿಗೆ ದಂಡ ವಿಧಿಸುತ್ತಿದ್ದು, ಇದರ ಜೊತೆಗೆ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನಗಳ ಫೋಟೊಗಳನ್ನು  ಸಿ.ಸಿ.ಟಿ.ವಿ ಮತ್ತು ಸಂಚಾರ ಸಿಬ್ಬಂದಿಗಳು ಕ್ಯಾಮೆರಾಗಳ ಮೂಲಕ ಸೆರೆಹಿಡಿದು ಸಂಬಂಧಪಟ್ಟ ವಾಹನ ಚಾಲಕ/ಮಾಲಿಕರುಗಳಿಗೆ ಆ ಕುರಿತು ದಂಡ ಕಟ್ಟುವಂತೆ ಎಫ್.ಟಿ.ವಿ.ಆರ್ (ಫೀಲ್ಡ್ ಟ್ರಾಫಿಕ್ ವಯಲೇಷನ್ ರಿಪೋರ್ಟ್) ನೊಟೀಸ್‍ಗಳನ್ನು ವಿಳಾಸಕ್ಕೆ ಕಳುಹಿಸುತ್ತಿದ್ದು, ಈ ನೋಟಿಸ್‍ಗಳಿಗೆ ಇನ್ನೂ ಸಾಕಷ್ಟು ಜನ ಸ್ಪಂದಿಸಿ ದಂಡ ಪಾವತಿ ಮಾಡದೇ ಇರುವುದು ಕಂಡು ಬಂದಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ತಿಳಿಸಿದ್ದಾರೆ.

ಈ ಕುರಿತು ಕೇಂದ್ರ ಸ್ಥಾನ ಅಪರಾಧ ಮತ್ತು ಸಂಚಾರ ವಿಭಾಗದ ಡಿ.ಸಿ.ಪಿ ಡಾ. ವಿಕ್ರಮ್ ವಿ ಅಮಟೆ ಅವರ ಮಾರ್ಗದರ್ಶನದಲ್ಲಿ ಮೈಸೂರು ನಗರ ಪೊಲೀಸರಿಂದ ವಿಶೇಷ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಈ ನೊಟೀಸ್‍ಗಳಿಗೆ ಸ್ಪಂದಿಸಿ ಹತ್ತಿರದ ಸಂಚಾರ ಪೊಲೀಸ್ ಠಾಣೆಗೆ ಹೋಗಿ ನಿಗದಿತ ದಂಡವನ್ನು ಪಾವತಿಸದೆ ಇರುವವರ ವಿಳಾಸಕ್ಕೆ ವ್ಯಾಪ್ತಿಯ ಬೀಟ್ ಪೊಲೀಸ್ ಆಫೀಸರ್‍ ಗಳನ್ನು ಖುದ್ದು ಕಳುಹಿಸಿ ಅಂತಹವರಿಂದ ದಂಡ ಪಾವತಿ ಮಾಡಿಸುವ ಕಾರ್ಯವನ್ನು ಆರಂಭಿಸಲಾಗಿದೆ. ಇದಲ್ಲದೇ 04/10/2018 ರಿಂದ ಎಲ್ಲಾ ಸಂಚಾರ ಪೊಲೀಸರು ನಗರದಲ್ಲಿ ಸಂಚರಿಸುವ ವಾಹನಗಳನ್ನು ಮತ್ತು ವಿವಿಧ ಸ್ಥಳಗಳಲ್ಲಿ ನಿಲುಗಡೆ ಮಾಡಿದ ವಾಹನಗಳನ್ನು ಪರಿಶಿಲನೆಗೆ ಒಳಪಡಿಸಿ ಅವುಗಳ ಮೇಲೆ ಇರುವ ಹಳೆಯ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳನ್ನು ಪರಿಶೀಲಿಸಿ ಅದನ್ನು ಸಂಬಂಧಿಸಿದ ಚಾಲಕ / ಮಾಲೀಕರಿಂದ ಸ್ಥಳದಲ್ಲಿಯೇ ಸಂಗ್ರಹಿಸಲಾಗುವುದು. ಒಂದು ವೇಳೆ ಸದರಿ ಹಣವನ್ನು ಸ್ಥಳದಲ್ಲಿಯೇ ಪಾವತಿಸದೆ ಹೋದಲ್ಲಿ ಅಂತಹ ವಾಹನಗಳನ್ನು ಪೊಲೀಸ್ ವಶಕ್ಕೆ ಪಡೆಯಲಾಗುವುದು.

ಆದ್ದರಿಂದ ಕೂಡಲೇ ಎಫ್.ಟಿ.ವಿ.ಆರ್. ನೋಟಿಸ್‍ಗಳಿಗೆ ದಂಡ ಕಟ್ಟದೇ ಬಾಕಿ ಉಳಿಸಿಕೊಂಡಿರುವ ವಾಹನ ಚಾಲಕರು/ಮಾಲೀಕರು ಈ ಕೂಡಲೇ ಹತ್ತಿರದ ಸಂಚಾರ ಪೊಲೀಸ್ ಠಾಣೆಗಳಲ್ಲಿ ದಂಡದ ಹಣವನ್ನು ಪಾವತಿಸಬೇಕೆಂದು ಮೈಸೂರು ನಗರದ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: