ಮೈಸೂರು

‘ಕಾಲಕ್ಕೆ ಕನ್ನಡ–ವಿಶ್ವಕವಿ ಕುವೆಂಪು’ ಅಭಿನಂದನಾ ಕಾರ್ಯಕ್ರಮ ಡಿ.29ರಂದು

ರಾಷ್ಟ್ರಕವಿ ಕುವೆಂಪು ಅವರ 112ನೇ ಜನ್ಮದಿನಾಚರಣೆ ಪ್ರಯುಕ್ತ ‘ಕಾಲಕ್ಕೆ ಕನ್ನಡಿ – ವಿಶ್ವಕವಿ ಕುವೆಂಪು’ ಸಾಂಸ್ಕೃತಿಕ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಡಿ.29 ರಂದು ಸಂಜೆ 5ಕ್ಕೆ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಮೈಸೂರು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ತಿಳಿಸಿದರು.

ಅವರು ಮಂಗಳವಾರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕುವೆಂಪು ವಿದ್ಯಾವರ್ಧಕ ಟ್ರಸ್ಟ್, ಜನಚೇತನ ಟ್ರಸ್ಟ್ ಮತ್ತು ಗ್ರಾಮೀಣ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆಸುತ್ತಿದ್ದು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಚಲನಚಿತ್ರನಟ ರಾಘವೇಂದ್ರ ರಾಜಕುಮಾರ್ ಆಗಮಿಸುವರು.

ಸಾಧಕರಿಗೆ ಸನ್ಮಾನ: ಸಾಧಕರಾದ ಡಾ.ಸಿ.ಪಿ.ಕೃಷ್ಣಕುಮಾರ್, ಅಂಬಳಿಕೆ ಹಿರಿಯಣ್ಣ, ಡಾ.ಟಿ.ಸಿ.ಪೂರ್ಣಿಮಾ, ಪ್ರೊ.ಮಲೆಯೂರು ಗುರುಸ್ವಾಮಿ, ಡಾ.ಲತಾ ರಾಜಶೇಖರ್, ಜನಾರ್ದನ್ (ಜೆನ್ನಿ) ಶಶಿಧರ್ ಭಾರಿಘಾಟ್, ಮಂಡ್ಯ ರಮೇಶ್ ಹಾಗೂ ಹಲವು ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ ಅಭಿನಂದಿಸಲಾಗುವುದು. ಈಗಾಗಲೇ, ಕುವೆಂಪು ಸಾಹಿತ್ಯ ಹಾಗೂ ಗಣ್ಯರ ಅನಿಸಿಕೆಯ ನೇಗಿಲ ಹಾಡು ವಿಶೇಷ ಸಂಚಿಕೆಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಜನಚೇತನಾ ಟ್ರಸ್ಟ್ ಅಧ್ಯಕ್ಷ ಪ್ರಸನ್ನ ಎನ್.ಗೌಡ ತಿಳಿಸಿದರು.

ಕಾರ್ಯಕ್ರಮದಲ್ಲಿ ಕುವೆಂಪು ಮತ್ತು ದೇಜಗೌ ಸಂದರ್ಶನದ ಆಯ್ದ ಭಾಗಗಳ ಸಾಕ್ಷ್ಯಚಿತ್ರ ಪ್ರದರ್ಶನ, ಕುವೆಂಪು ವಿರಚಿತ ಶೂದ್ರ ತಪಸ್ವಿ’, ‘ಜಲಗಾರ’ ನಾಟಕ ಪ್ರದರ್ಶನವನ್ನು ಡ್ರಾಮಾ ಜ್ಯೂನಿಯರ್ ಖ್ಯಾತಿ ಕಲಾವಿದರು ಅಭಿನಯಿಸುವರು. ಪ್ರಸಿದ್ಧ ಗಾಯಕಿಯರಾದ ಬಿ.ಕೆ.ಸುಮಿತ್ರ ಹಾಗೂ ಡಾ.ಶಮಿತಾ ಮಲ್ನಾಡ್ ಅವರಿಂದ ಗೀತಗಾಯನ, ವಿಶ್ವಮಾನವ ಸಂಸ್ಥೆಯ ವಿಕಲಚೇತನ ಮಕ್ಕಳಿಂದ ನೃತ್ಯ ರೂಪಕ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಕಲಾಕೂಟದ ಎಂ.ಚಂದ್ರಶೇಖರ್ ತಿಳಿಸಿದರು.

ಕುವೆಂಪುರವರ ಜನ್ಮದಿನಾಚರಣೆ ಅಂಗವಾಗಿ ಕಳೆದ ಡಿ.22ರಿಂದ ಕುವೆಂಪು ಅವರ ಪುತ್ರಿ ತಾರಿಣಿ ಚಿದಾನಂದ್ ಅವರು ರಥಯಾತ್ರೆಗೆ ಚಾಲನೆ ನೀಡಿದ್ದು ಮೈಸೂರು ತಾಲೂಕಿನಾದ್ಯಂತ ಸಂಚರಿಸುತ್ತಾ ವಿಶ್ವಮಾನವ ಕುವೆಂಪುರವರ ಸಂದೇಶಗಳನ್ನು ವೈಚಾರಿಕತೆ, ಜ್ಯಾತ್ಯತೀತ ನಿಲುವುಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ನಡೆಯುತ್ತಿದೆ. ಸಾಹಿತ್ಯವನ್ನು ಓದುವುದಷ್ಟೇ ಅಲ್ಲ ಸಾಂಸ್ಕೃತಿಕವಾಗಿ, ನೃತ್ಯರೂಪಕ-ನಾಟಕಗಳ ಮೂಲಕ ಜನರನ್ನು ತಲುಪಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಗ್ರಾಮೀಣ ಸಂಸ್ಥೆ ಅಧ್ಯಕ್ಷ ರಾಜು ಬಿ. ಕನ್ನಲಿ, ಜನಚೇತನಾ ಟ್ರಸ್ಟ್’ನ ಪ್ರಶಾಂತ್ ಉಪಸ್ಥಿತರಿದ್ದರು.

Leave a Reply

comments

Related Articles

error: