ಮೈಸೂರು

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎರಡನೇ ದಿನಕ್ಕೆ ಕಾಲಿರಿಸಿದ ಪೌರಕಾರ್ಮಿಕರ ಧರಣಿ : ಪೊರಕೆ ಹಿಡಿದು ಸ್ವಚ್ಛತೆಗೆ ಮುಂದಾದ ಪಾಲಿಕೆಯ ಅಧಿಕಾರಿಗಳು

ಮೈಸೂರು,ಅ.4:- ಸ್ವಚ್ಛನಗರಿ ಪಟ್ಟಿಯಲ್ಲಿ ದೇಶದಲ್ಲಿಯೇ ಮೊದಲ ಹತ್ತರೊಳಗೆ ಸ್ಥಾನ ಪಡೆದಿದ್ದ ಸಾಂಸ್ಕೃತಿಕ ನಗರಿ ಎರಡು ದಿನಗಳಿಂದ ಕಸದ ರಾಶಿಯಿಂದ ತತ್ತರಿಸಿ ಹೋಗಿದೆ. ಪೌರಕಾರ್ಮಿಕರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದು, ಧರಣಿ ಎರಡನೇ ದಿನಕ್ಕೆ ಕಾಲಿರಿಸಿದೆ. ಇಂದು ಸಯ್ಯಾಜಿರಾವ್ ರಸ್ತೆಯಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳೇ ಪೊರಕೆ ಹಿಡಿದು ಸ್ವಚ್ಛತೆಗೆ ಮುಂದಾಗಿದ್ದಾರೆ.

ಇನ್ನೇನು ಕೆಲವೇ ದಿನಗಳಲ್ಲಿ ದಸರಾ ಮಹೋತ್ಸವ ನಡೆಯಲಿದೆ. ಈಗಾಗಲೇ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಯುವ ಸಂಭ್ರಮ ಆರಂಭವಾಗಿದೆ.  ಮೈಸೂರು ನಗರದ ಪ್ರಮುಖ ಬೀದಿಗಳಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಗಳೇ ಕಣ್ಣಿಗೆ ಗೋಚರಿಸುತ್ತಿವೆ. ನಗರದ ಹೃದಯಭಾಗವಾದ ಅಗ್ರಹಾರ, ದೇವರಾಜ ಮಾರುಕಟ್ಟೆ, ಮಹಾತ್ಮಾಗಹಾಂಧಿ ರಸ್ತೆ, ವಾಣಿವಿಲಾಸ ಮಾರುಕಟ್ಟೆ, ಚಾಮರಾಜಮೊಹಲ್ಲಾ, ದೇವರಾಜ ಮೊಹಲ್ಲಾ, ಉದಯಗಿರಿ ಸೇರಿದಂತೆ ಹಲವೆಡೆ ಕಸಗಳು ತುಂಬಿ ತುಳುಕಾಡುತ್ತಿವೆ. ದಸರಾ ಮಹೋತ್ಸವಕ್ಕೆ ಪ್ರವಾಸಿಗರು ಆಗಮಿಸಲಿದ್ದು, ಇದೇ ರೀತಿ ಕಸದ ರಾಶಿಗಳು ಕಂಡು ಬಂದಲ್ಲಿ ಪ್ರವಾಸೋದ್ಯಮ ಸೇರಿದಂತೆ ಎಲ್ಲ ರೀತಿಯಿಂದಲೂ ಹೊಡೆತ ಬೀಳಲಿದೆ. ಇಂದು ಮಹಾನಗರ ಪಾಲಿಕೆಯ ಅಧಿಕಾರಿಗಳೇ ಪೊರಕೆ ಹಿಡಿದು ಸಯ್ಯಾಜಿ ರಾವ್ ರಸ್ತೆಯಲ್ಲಿ ಬಿದ್ದ ಕಸಗಳನ್ನು ತೆಗೆಯುತ್ತಿರುವುದು ಕಂಡು ಬಂದಿದೆ.

ಈ ಕುರಿತು ಮಾತನಾಡಿದ ಅಧಿಕಾರಿಗಳು ಪೌರಕಾರ್ಮಿಕರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅದರಿಂದ ನಗರದಲ್ಲಿ ಅನೈರ್ಮಲ್ಯ ಉಂಟಾಗಿದೆ.  ಸರ್ಕಾರ ಶೀಘ್ರವೇ ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುತ್ತದೆ ಎಂಬ ನಂಬಿಕೆ ನಮ್ಮದಾಗಿದ್ದು, ಪೌರಕಾರ್ಮಿಕರು ಶೀಘ್ರವೇ ಅವರ ಕರ್ತವ್ಯಕ್ಕೆ ಮರಳಲಿದ್ದಾರೆಂಬ ನಿರೀಕ್ಷೆಯಲ್ಲಿದ್ದೇವೆ. ಅವರು ಕರ್ತವ್ಯಕ್ಕೆ ಹಾಜರಾಗದ ಕಾರಣ ನಾವೇ ಈ ಬೀದಿಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದೇವೆ ಎಂದರು.

ಈ ಕುರಿತು ಮಾತನಾಡಿದ ಪೌರಕಾರ್ಮಿಕರು ಇವತ್ತೊಂದು ದಿನ ಪೊರಕೆ ಹಿಡಿದು ಬೀದಿಗಿಳಿಯುತ್ತಾರೆ. ಸರ್ಕಾರದ ಮನ ಓಲೈಸಲು ಈ ರೀತಿ ಮಾಡುತ್ತಿದ್ದಾರೆ. ನಾಳೆ ಯುಜಿಡಿಯವರು ಸ್ಟಾಪ್ ಮಾಡುತ್ತಾರೆ ಆಗೇನು ಮಾಡುತ್ತಾರೆ ಎಂದು ಪ್ರಶ್ನಿಸಿದರಲ್ಲದೇ, ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸುವವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: