ಮೈಸೂರು

ಮಗುವಿಗೆ ಗ್ಯಾಸ್ಟ್ರೋಎಂಟಾರಾಲಜಿ ಯಶಸ್ವಿ ಶಸ್ತ್ರಚಿಕಿತ್ಸೆ: ಜೆಎಸ್ಎಸ್ ಆಸ್ಪತ್ರೆಯಿಂದ ಜಾಗತಿಕ ದಾಖಲೆ

ಮಕ್ಕಳಲ್ಲಿ ಅಪರೂಪದಲ್ಲಿ ಅಪರೂಪವೆನ್ನಿಸುವ ಮೇದೋಜೀರಕಾಂಗದ ನಾಳಕ್ಕೆ ಕೃತಕ ನಾಳ ಅಳವಡಿಸುವ ಗ್ಯಾಸ್ಟ್ರೋಎಂಟಾರಾಲಜಿ ಶಸ್ತ್ರಚಿಕಿತ್ಸೆಯನ್ನು ಜೆಎಸ್‍ಎಸ್ ಆಸ್ಪತ್ರೆಯ ತಜ್ಞ ವೈದ್ಯರ ತಂಡವು ಯಶಸ್ವಿಯಾಗಿ ನಡೆಸಿ ಜಾಗತಿಕ ದಾಖಲೆ ಬರೆದಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಎಂ.ಗುರುಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅವರು ಮಂಗಳವಾರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗುಂಡ್ಲುಪೇಟೆಯ ರಂಗನಾಥಪುರದ ರಮೇಶ್ ಎಂಬುವವರ ಪುತ್ರ ಅಭಿಷೇಕ್ (5) ನಿಶಕ್ತಿ ಹಾಗೂ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ. ಆತನ ಪರೀಕ್ಷೆ ನಡೆಸಿದ ವೈದ್ಯರು ರೋಗಿಗೆ ಮೇದೋಜೀರಕಾಂಗದ ನಾಳದಿಂದ ದ್ರವ ಸೋರಿಕೆಯಾಗಿ ಬಲಭಾಗದ ಎದೆಗೂಡಿನ ಪೊರೆಯಲ್ಲಿ ಸಂಗ್ರಹವಾಗಿರುವುದು ದೃಢಪಟ್ಟಿದೆ. ಇದು ಮಕ್ಕಳಲ್ಲಿ ತೀರ ಅಪರೂಪವಾಗಿ ಕಂಡು ಬರುವ ಕಾಯಿಲೆ. ಈ ಬಗ್ಗೆ ಅಂತರ್‍ಜಾಲದಲ್ಲಿ ಸಮೀಕ್ಷೆ ನಡೆಸಿದರೆ ಬೆರಳೆಣಿಕೆಯಷ್ಟು ಪ್ರಕರಣಗಳು ದಾಖಲಾಗಿವೆ ಎಂದರು.

ಇಂತಹ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆಯನ್ನು ಡಿ.21ರಂದು ಜೆಎಸ್ಎಸ್ ಆಸ್ಪತ್ರೆಯ ಗ್ಯಾಸ್ಟ್ರೋಎಂಟಾರಾಲಜಿ ಮತ್ತು ಲಿವರ್ ಚಿಕಿತ್ಸಾ ತಜ್ಞ ವೈದ್ಯ ಡಾ.ಹೆಚ್.ಪಿ.ನಂದೀಶ್ ಮತ್ತು ತಂಡವೂ ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದು ರೋಗಿಗೆ ಎಂಡೋಸ್ಕೋಪಿಕ್ ಮೂಲಕ ಮೇದೋಜೀರಕಾಂಗದ ನಾಳಕ್ಕೆ ಕೃತಕ ನಾಳವನ್ನು ಅಳವಡಿಸಿ ದ್ರವ ಸೋರಿಕೆಯನ್ನು ತಡೆಗಟ್ಟಲಾಗಿದೆ. ಈಗ ರೋಗಿಯೂ ಸಂಪೂರ್ಣ ಆರೋಗ್ಯವಾಗಿದ್ದಾನೆ ಹಾಗೂ ಜೀವನಪರ್ಯಂತ ಔಷಧೋಪಚಾರದ ಅಗತ್ಯವಿದೆ ಎಂದು ತಿಳಿಸಿದರು.

ಮದ್ಯಪಾನ ವ್ಯಸನಿಗಳಲ್ಲಿ ಹಾಗೂ ವಯಸ್ಕರಲ್ಲಿ ಈ ಕಾಯಿಲೆಯೂ ಸಾಮಾನ್ಯವಾಗಿದ್ದರೂ ಚಿಕ್ಕ ಮಕ್ಕಳಲ್ಲಿ ಅತಿ ವಿರಳ. ಇಂತಹ ವಿರಳ ಹಾಗೂ ಅಪರೂಪದ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಜೆಎಸ್ಎಸ್ ಆಸ್ಪತ್ರೆಯೂ ಕ್ಲಿಷ್ಟ ಮಾದರಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ. ಇದೊಂದು ಅಪರೂಪದ ಜಾಗತಿಕ ದಾಖಲೆಯ ಶಸ್ತ್ರ ಚಿಕಿತ್ಸೆಯಾಗಿದೆ ಎಂದು ಶಸ್ತ್ರಚಿಕಿತ್ಸಕ ಡಾ.ಹೆಚ್.ಪಿ.ನಂದೀಶ್ ತಿಳಿಸಿದರು.

ಅತಿಕಡಿಮೆ ವೆಚ್ಚದಲ್ಲಿ ಶಸ್ತ್ರ ಚಿಕಿತ್ಸೆ ಮಾಡಿ ಆಸ್ಪತ್ರೆಯು ಮಾನವೀಯತೆ ಮೆರೆದಿದ್ದು ಜೈನ್ ಸಮಾಜವೂ ಸಹಕರಿಸಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅರವಳಿಕೆ ತಜ್ಞೆ ಡಾ.ಪ್ರತಿಭಾ ಮ್ಯಾಚೆ, ರೋಗಿಯ ಪೋಷಕ ರಮೇಶ್, ಶಸ್ತ್ರ ಚಿಕಿತ್ಸೆಗೊಳಗಾದ ಅಭಿಷೇಕ್ ಹಾಗೂ ಇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

comments

Related Articles

error: