
ಪ್ರಮುಖ ಸುದ್ದಿ
ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಖದೀಮರ ಬಂಧನ
ರಾಜ್ಯ( ಬೆಂಗಳೂರು)ಅ.4:- ಒರಿಸ್ಸಾದಿಂದ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಖದೀಮರನ್ನು ಬಂಧಿಸಿರುವ ಸಿಸಿಬಿ ಪೊಲೀಸರು 10 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಕಾವಲ್ಭೈರಸಂದ್ರದ ಮೋಹನ್ (26), ದೊಡ್ಡಬಳ್ಳಾಪುರದ ಗಂಗತ್ತೂರಿನ ನಿಖಿಲ್ (22)ಎಂದು ಗುರುತಿಸಲಾಗಿದೆ. ಬಂಧಿತರಿಂದ 10 ಕೆಜಿ ಗಾಂಜಾ, 2 ಮೊಬೈಲ್, ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ.
ಆರೋಪಿಗಳು ಆರ್ಟಿ ನಗರ, ಕಾವಲ್ ಭೈರಸಂದ್ರ, ದಿಣ್ಣೂರು ಇನ್ನಿತರ ಕಡೆಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು. ಇದರ ಮೂಲವನ್ನು ಪತ್ತೆ ಹಚ್ಚಿದ ಪೊಲೀಸರಿಗೆ ಆರೋಪಿಗಳು ಒರಿಸ್ಸಾದಿಂದ ಗಾಂಜಾ ತಂದು ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ.
ಆರೋಪಿಗಳು ಒರಿಸ್ಸಾದಿಂದ ಗಾಂಜಾವನ್ನು ತೆಗೆದುಕೊಂಡು ಬರುತ್ತಿರುವ ಮಾಹಿತಿಯಾಧರಿಸಿ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿ ಕಾದು ಕುಳಿತಿದ್ದ ಸಿಸಿಬಿ ಪೊಲೀಸರು ರೈಲಿನಿಂದ ಕೆಳಗಳಿಯುತ್ತಿದ್ದ ಆರೋಪಿಗಳನ್ನು ಬಂಧಿಸಿ ಗಾಂಜಾವನ್ನು ವಶಪಡಿಸಿಕೊಂಡು ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. (ಕೆ.ಎಸ್,ಎಸ್.ಎಚ್)