ಮೈಸೂರು

ಮನುಷ್ಯರಿಗೆ ಮಹತ್ವವಿಲ್ಲದ ನೆಲದಲ್ಲಿ ಕೋಮುವಾದಕ್ಕೆ ಹೆಚ್ಚಿನ ಮಹತ್ವ: ಪ್ರೊ. ಅರವಿಂದ ಮಾಲಗತ್ತಿ

ಯಾವ ನೆಲದಲ್ಲಿ ಮನುಷ್ಯರಿಗೆ ಮಹತ್ವ ಇರುವುದಿಲ್ಲವೋ ಆ ನೆಲದಲ್ಲಿ ಕೋಮುವಾದಕ್ಕೆ ಹೆಚ್ಚಿನ ಮಹತ್ವ ಇರುತ್ತದೆ. ಮನುಷ್ಯರನ್ನು ಹೊರತುಪಡಿಸಿ ಮಾತನಾಡುವ ಕೆಲಸವನ್ನು ಕೋಮುವಾದ ಮಾಡುತ್ತದೆ ಎಂದು ಪ್ರೊ.ಅರವಿಂದ ಮಾಲಗತ್ತಿ ಹೇಳಿದರು.

ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಅವರ 60 ನೇ ಮಹಾಪರಿನಿರ್ವಾಣದ ಅಂಗವಾಗಿ ಮಂಗಳವಾರ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ತರಕಾರಿ ಬೆಳೆಯುವ ರೈತರು ಹಾಗೂ ಮಾರಾಟಗಾರರ ಶಾಖೆ ಮೈದಾನದಲ್ಲಿ ‘ಉಲ್ಬಣಿಸುತ್ತಿರುವ ಕೋಮುವಾದ – ನೇಪಥ್ಯಕ್ಕೆ ಸರಿಯುತ್ತಿರುವ ಶೋಷಿತ ರಾಜಕಾರಣ’ ಎಂಬ ವಿಷಯ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದರು.

ದಲಿತರಲ್ಲಿ ಏಕತಾ ಮನೋಭಾವ ಬೆಳೆಯಬೇಕು. ಸಂಘಟನಾ ಶಕ್ತಿ ಇರಬೇಕು. ನಾವೆಲ್ಲಾ ಒಂದೇ ಎಂಬ ಒಗ್ಗಟ್ಟಿನ ಭಾವನೆ ಬೆಳೆದರೆ ಹೊರಗಿನ ಯಾವ ಶಕ್ತಿಯೂ ನಮ್ಮನ್ನು ಬೇರ್ಪಡಿಸಲು ಸಾಧ‍್ಯವಿಲ್ಲ ಎಂದು ಹೇಳಿದರು.

ಅಂಬೇಡ್ಕರ್ ಅವರ ಪರಿನಿರ್ವಾಣದ ದಿನವನ್ನು ಅರಿವಿನ ದಿನವನ್ನಾಗಿ ಆಚರಿಸಬೇಕು. ಅವರ ವಿಚಾರಧಾರೆಗಳು ನಮ್ಮ ಜೊತೆ ಇರುವವರೆಗೂ ಅವರು ಜೀವಂತವಾಗಿರುತ್ತಾರೆ ಎಂದರು.

ಧರ್ಮಕಾರಣ ಮತ್ತು ರಾಜಕಾರಣದಿಂದಾಗಿ ಶೋಷಿತರ ಕುರಿತಾಗಿ ಚಿಂತನೆ ನಡೆಸುವ ಬದಲು ಧರ್ಮ ಚಿಂತನೆಯ ಕಾರ್ಯಗಳು ನಡೆಯುತ್ತಿವೆ. ಧರ್ಮಕೇಂದ್ರಿತ ಆಡಳಿತಕ್ಕೆ ಹೆಚ್ಚು ಒತ್ತು ನೀಡಿ ಅಲ್ಪಸಂಖ‍್ಯಾತರ ಮೇಲೆ ಗೂಬೆ ಕೂರಿಸುವ ಪ್ರಯತ್ನಗಳು ನಡೆಯುತ್ತಿವೆ. ತಳಸಮುದಾಯದವರಲ್ಲಿ ಅರಿವು, ಜಾಗೃತಿ ಮೂಡಿದರೆ ಹಿಂದೂ ಧರ್ಮದ ಅಡಿಪಾಯಕ್ಕೆ ಧಕ್ಕೆ ಬರುತ್ತದೆ ಎಂಬ ಭಾವನೆಯಲ್ಲಿ ಮೇಲ್ವರ್ಗದವರು ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಹಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಪತ್ರಿಕೋದ್ಯಮಿ ರಾಜಶೇಖರ ಕೋಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಅಂಬೇಡ್ಕರ್ ಅವರ ಸಂವಿಧಾನದ ಆಶಯ ಇಲ್ಲಿಯವರೆಗೆ ಈಡೇರಿಲ್ಲ. ಇದು ನೋವಿನ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು. ಇದಕ್ಕೆ ಅನೇಕ ಕಾರಣಗಳಿವೆ. ಇಂದು ಶೋಷಿತ ಸಮುದಾಯ ಉತ್ತಮ ಶಿಕ್ಷಣ ಪಡೆಯುತ್ತಿಲ್ಲ. ದಲಿತರಿಗೆ ಮತ್ತು ಶೋಷಿತರಿಗೆ ಶಿಕ್ಷಣದ ಬಗ್ಗೆ ಅರಿವಿಲ್ಲ. ದಲಿತರು ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ಅವರಲ್ಲಿ ತಿಳುವಳಿಕೆ ಮೂಡಿ ಜಾಗೃತಿ ಉಂಟಾದರೆ ಪ್ರಶ್ನೆ ಮಾಡುವ ಮನೋಭಾವನೆ ಬೆಳೆಯುತ್ತದೆ. ಆದರೆ ಕೆಲವು ಕಾಣದ ಕೈಗಳು ತಳವರ್ಗದವರು ಶಿಕ್ಷಣ ಪಡೆಯದಂತೆ ಸಂಚು ನಡೆಸುತ್ತಿದ್ದಾರೆ ಎಂದು ಹೇಳಿದರು.

ರಾಜ್ಯ ಸರ್ಕಾರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದರೂ ಸಹ ಯೋಜನೆಗಳ ಫಲ ದಲಿತರಿಗೆ ಸಿಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಕೋಮುವಾದಿಗಳು ಮತ್ತು ಮೇಲ್ವರ್ಗಗಳ ಸಂಚು. ದಲಿತರು ಶಿಕ್ಷಣ ಪಡೆದು ಜಾಗೃತರಾದರೆ ತಮ್ಮ ಬುಡ ಸಡಿಲವಾಗುತ್ತದೆ ಎಂಬ ಉದ್ದೇಶದಿಂದ ಅವರು ಶಿಕ್ಷಣ ಪಡೆಯದಂತೆ ಮಾಡುತ್ತಿದ್ದಾರೆ ಎಂದರು.

ಕ್ಷಣಿಕ ರಾಜಕೀಯ ಲಾಭಕ್ಕಾಗಿ ಹಲವಾರು ವರ್ಷಗಳಿಂದ ದೌರ್ಜನ್ಯ ನಡೆಸುತ್ತಿರುವ ಕೋಮುವಾದಿಗಳೊಂದಿಗೆ ದಲಿತ ರಾಜಕಾರಣಿಗಳು ಕೈಜೋಡಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರಲ್ಲದೆ, ಇದು ನೋವಿನ ಸಂಗತಿ ಎಂದು ಹೇಳಿದರು. ದಲಿತ ರಾಜಕಾರಣಿಗಳು ಅಂಬೇಡ್ಕರ್, ಬುದ್ಧ, ಬಸವ ಇವರ ಆಶಯಗಳಿಗೆ ಬದ್ಧರಾಗಿರಬೇಕು. ವ್ಯತಿರಿಕ್ತವಾಗಿ ನಡೆದುಕೊಳ್ಳಬಾರದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಜಿಲ್ಲಾ ಸಂಘಟನಾ ಸಂಚಾಲಕ ರತ್ನಪುರಿ ಪುಟ್ಟಸ್ವಾಮಿ, ಶಂಭುಲಿಂಗಸ್ವಾಮಿ, ಖಜಾಂಚಿ ಬಿ.ಡಿ.ಶಿವಬುದ್ಧಿ, ಎಸ್ ರಾಜಣ್ಣ, ಎನ್. ಗುರುಲಿಂಗು ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: