ಮೈಸೂರು

ಜೀವನ ನಿರ್ವಹಣೆಗಾಗಿ ಶಿಕ್ಷಕ ವೃತ್ತಿ ಆಯ್ಕೆ ಬೇಡ ; ಸಾಮಾಜಿಕ ಜವಾಬ್ದಾರಿ ನಿರ್ವಹಿಸುವ ಗುರಿ ಹೊಂದಿರಿ : ಡಾ.ಎಚ್.ಎಲ್.ನಾಗರಾಜ್

ಮೈಸೂರು,ಅ.5:- ಇಂದಿನ ಯುವಕರು ಕೇವಲ ಜೀವನ ನಿರ್ವಹಣೆಗಾಗಿ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳದೆ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುವ ಗುರಿ ಹೊಂದಿರಬೇಕು ಎಂದು ಹಾಸನ ಉಪವಿಭಾಗಾಕಾರಿ ಡಾ.ಎಚ್.ಎಲ್.ನಾಗರಾಜ್ ಹೇಳಿದರು.

ಚನ್ನರಾಯಪಟ್ಟಣದ ಪ್ರತಿಮಾ ಟ್ರಸ್ಟ್‍ನ ಚಿಂತನ ಮಂಥನ ಕ್ರಿಯಾಶೀಲ ರಾಜ್ಯ ವೇದಿಕೆ ಹಾಗೂ ಮೈಸೂರಿನ ಶಾರದಾವಿಲಾಸ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಕಾಲೇಜು ಸಭಾಂಗಣದಲ್ಲಿ ನಿನ್ನೆ ಆಯೋಜಿಸಿದ್ದ ಚಿಂತನ ಮಂಥನ-3 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಎಂಬ ವಿಷಯವಾಗಿ ಮಾತನಾಡಿದ ಅವರು ವೃತ್ತಿಯ ಮೌಲ್ಯಗಳನ್ನು ಬಿಟ್ಟುಕೊಡದಂತೆ ಕರ್ತವ್ಯ ನಿರ್ವಹಣೆ ಮಾಡಬೇಕು. ಭಾವನಾತ್ಮಕ ಸಂಬಂಧಗಳು ಹಾಗೂ ಮೌಲ್ಯಗಳನ್ನೊಳಗೊಂಡ ವಿದ್ಯಾರ್ಥಿಗಳನ್ನು ತಯಾರು ಮಾಡಿ ಸಮಾಜಕ್ಕೆ ನೀಡಬೇಕೆಂದರು. ಶಿಕ್ಷಕರು ಸಮಾಜದ ನಿರ್ಮಾತೃಗಳಾಗಬೇಕು ಎಂದು ಬಯಸಿದ ಅವರು ಸಂಸ್ಕಾರ ಮತ್ತು ಪರಿಪೂರ್ಣತೆಯತ್ತ ಸಾಗಲು ಶಿಕ್ಷಕರು ಪೂರಕವಾಗಿ ವರ್ತಿಸಬೇಕು. ಇಲ್ಲದಿದ್ದರೆ ಸಮಾಜಕ್ಕೆ ಮಾರಕ ಕಟ್ಟಿಟ್ಟ ಬುತ್ತಿಯಾಗುತ್ತದೆ. ಅಪರಾಧ ಪ್ರಕರಣಗಳು ಹೆಚ್ಚಾಗುವುದನ್ನು ತಡೆಗಟ್ಟಲು ಶಿಕ್ಷಕರ ಜವಾಬ್ದಾರಿಯೂ ಹೆಚ್ಚಾಗಿದೆ. ಸಮಾಜವೂ ಕೂಡ ಶಿಕ್ಷಕ ಸಮುದಾಯದಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತಿದೆ ಎಂದರು. ಸಮಾಜದಲ್ಲಿ ಶಿಕ್ಷಕ ಸಮುದಾಯಕ್ಕೆ ಅಪಾರ ಗೌರವವಿದ್ದ ದಿನಗಳು ದೂರವಾಗುತ್ತಿವೆ. ಆದರೂ ಈ ವೃತ್ತಿ ತನ್ನ ಮೌಲ್ಯಗಳನ್ನು ಉಳಿಸಿಕೊಂಡಿದ್ದು ವ್ಯಕ್ತಿತ್ವದ ಮೂಲಕ ನಾವು ಮಾಡುವ ಕೆಲಸಕ್ಕೆ ಗೌರವ ತಂದುಕೊಡಬೇಕು. ಈ ಕ್ಷೇತ್ರದಲ್ಲಿ ಹೊಸ ಪರಿಭಾಷೆಯನ್ನು ಬರೆಯುವ ಕೆಲಸ ಯುವಪೀಳಿಗೆಯಿಂದ ಆಗಬೇಕಿದೆ. ನಮ್ಮ ನಿರೀಕ್ಷೆಗೆ ತಕ್ಕಂತೆ ಸಮಾಜ ಇಲ್ಲದಿರುವುದರಿಂದ ಬದಲಾವಣೆ ಅನಿವಾರ್ಯವಾಗಿದೆ. ಆದರ್ಶಕ್ಕೆ ಮೊದಲ ವ್ಯಕ್ತಿ ಶಿಕ್ಷಕರಾಗಿರಬೇಕೆಂದರು. ವಿದ್ಯಾರ್ಥಿಗಳನ್ನು ಪ್ರೀತಿಯಿಂದ ದಂಡಿಸುವ ಹಕ್ಕನ್ನು ಶಿಕ್ಷಕರಿಂದ ಕಸಿದುಕೊಂಡಿರುವುದು ಸರಿಯಲ್ಲವೆಂದು ಅಭಿಪ್ರಾಯಪಟ್ಟ ಅವರು ಇದರ ಪರಿಣಾಮವಾಗಿ ಪೊಲೀಸ್ ಲಾಠಿಗೆ ಹೆಚ್ಚಿನ ಕೆಲಸ ಕೊಡುವಂತಾಗಿದೆ. ಅದಕ್ಕಾಗಿಯೇ ಈ ವೃತ್ತಿಯ ಬಗ್ಗೆ ಚಿಂತಿಸುವಂತಾಗಿದೆ ಎಂದರು. ವಿದ್ಯಾರ್ಥಿಗಳಲ್ಲಿ ಸಾಮಾನ್ಯಜ್ಞಾನ ಹೆಚ್ಚಿಸುವ ಕುತೂಹಲಕಾರಿ ಪ್ರಶ್ನೆಗಳನ್ನು ಕೇಳುವ ಮೂಲಕ ತಮ್ಮ ಜೀವನದ ಅನುಭವಗಳ ಮೆಲುಕುಹಾಕಿ ವಿದ್ಯಾರ್ಥಿಗಳನ್ನು ಚಿಂತನೆಗೆ ಹಚ್ಚಿದರು.

ಕಾಲೇಜು ಪ್ರಾಂಶುಪಾಲರಾದ ಡಾ.ಪಿ.ಎಸ್.ಸುರೇಶ್ ಅಧ್ಯಕ್ಷತೆವಹಿಸಿ ಮಾತನಾಡಿ ಪ್ರತಿಮಾಟ್ರಸ್ಟ್‍ನ ಕಾರ್ಯವೈಖರಿ ಹಾಗೂ ಚಿಂತನೆಗಳು ರಾಜ್ಯದಲ್ಲಿಯೇ ಮಾದರಿಯಾದ ಕಾರ್ಯಕ್ರಮವಾಗಿದ್ದು ಉತ್ತರದಾಯಿ ಸ್ಥಾನದಲ್ಲಿರುವ ಶಿಕ್ಷಕರ ಪಾತ್ರ ಕುರಿತಂತೆ ತಿಳಿಸಿದರು. ತಮ್ಮ ಮನಸ್ಸಿನಲ್ಲಿ ಮೂಡಿದ ಪ್ರಶ್ನೆಗಳನ್ನು ಕೇಳುವ ಮೂಲಕ ಭಾವಿಶಿಕ್ಷಕರು ಸಂಪನ್ಮೂಲ ವ್ಯಕ್ತಿಗಳಿಂದ ಉತ್ತರ ಕಂಡುಕೊಂಡರು. ಮಕ್ಕಳ ರಂಗಭೂಮಿ ನಿರ್ದೇಶಕ ಯೋಗಾನಂದ ಮಾತನಾಡಿದರು. ಚಿಂತನಮಂಥನ ಕ್ರಿಯಾಶೀಲ ರಾಜ್ಯವೇದಿಕೆಯ ಚಿಂತಕರಾದ ಡಾ.ದಿನೇಶ್, ಡಾ.ಸಿ.ಎಲ್.ಶಿವಕುಮಾರ್, ಎ.ಎಲ್.ನಾಗೇಶ್, ಹರೀಶ್, ತಿಮ್ಮೇಶ್‍ಪ್ರಭು ಹಾಗೂ ಉಮೇಶ್‍ತೆಂಕನಹಳ್ಳಿ ಇದ್ದರು. (ಎಸ್.ಎಚ್)

Leave a Reply

comments

Related Articles

error: