ಕರ್ನಾಟಕ

ಭೀಮಾ ನದಿಗೆ ಬಿದ್ದು ಮೃತಪಟ್ಟ ಮೂವರು ಬಾಲಕಿಯರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ

ವಿಜಯಪುರ,ಅ.5-ನೀರು ತರಲು ಹೋಗಿ ಕಾಲು ಜಾರಿ ಭೀಮಾ ನದಿಗೆ ಬಿದ್ದು ಮೃತಪಟ್ಟಿದ್ದ ಮೂವರು ಬಾಲಕಿಯರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ನೀಡುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶಿಸಿದೆ.

ಭಾಗ್ಯಶ್ರೀ ಬಸವರಾಜ ಸುತಾರ (15), ಭಾಗ್ಯ ಸಿದ್ದರಾಮ ಧೂಳೆ (14) ಹಾಗೂ ಮಹಾನಂದ ಅಪ್ಪಾಶಾ ಆತನೂರ (14) ನದಿಗೆ ಬಿದ್ದು ಮೃತಪಟ್ಟಿದ್ದರು.

ಭೀಮಾ ನದಿ ತೀರದಲ್ಲಿ ಮರಳು ಗಣಿಗಾರಿಕೆ ನಡೆಸಲು ಮಹಾರಾಷ್ಟ್ರ ಸರ್ಕಾರದಿಂದ ಅನುಮತಿ ಪಡೆದ ಪುಣೆಯ ಕೆ.ಜೆ. ಇನ್‌ಫ್ರಾಸ್ಟ್ರಕ್ಚರ್‌ ಕಂಪನಿ ಬಾಲಕಿಯರ ಕುಟುಂಬದವರಿಗೆ ಅ.31ರೊಳಗೆ ಒಟ್ಟು 75 ಲಕ್ಷ ರೂ. ಪರಿಹಾರ ನೀಡಬೇಕು.

ನಿಗದಿತ ಅವಧಿಯೊಳಗೆ ಪಾವತಿ ಮಾಡದಿದ್ದರೇ ಸರ್ಕಾರವೇ ಬಾಲಕಿಯರ ಕುಟುಂಬಳಿಗೆ ಪರಿಹಾರ ನೀಡಿ ನಂತರ ಕಂಪನಿಯಿಂದ ವಸೂಲಿ ಮಾಡಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಏನಾಗಿತ್ತು? : 2014ರ ಜುಲೈ 4ರಂದು ಸಿಂದಗಿ ತಾಲೂಕಿನ ಗುಬ್ಬೇವಾಡದ ಗ್ರಾಮದೇವತೆ ಪೂಜೆಗೆ ನೀರು ತರಲು ತೆರಳಿದ್ದ ಭಾಗ್ಯಶ್ರೀ ಬಸವರಾಜ ಸುತಾರ, ಭಾಗ್ಯ ಸಿದ್ದರಾಮ ಧೂಳೆ ಹಾಗೂ ಮಹಾನಂದ ಅಪ್ಪಾಶಾ ಆತನೂರ  ನದಿಯಲ್ಲಿ ಅಪಾರ ಪ್ರಮಾಣದ ಮರಳು ಗಣಿಗಾರಿಕೆಯಿಂದ ಉಂಟಾದ ಕಂದಕಗಳಲ್ಲಿ ಬಿದ್ದು ಮೃತಪಟ್ಟಿದ್ದರು. ಮಾಜಿ ಶಾಸಕ ಸಾರ್ವಭೌಮ ಬಗಲಿ ಬಾಲಕಿಯರ ಸಾವಿಗೆ ಮರಳು ಗಣಿಗಾರಿಕೆ ಕಾರಣ, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮೆಟ್ಟಿಲೇರಿದ್ದರು.

ವಾದ ಪ್ರತಿವಾದ ಆಲಿಸಿದ ನ್ಯಾಯಮಂಡಳಿ ಈ ಪ್ರಕರಣದಲ್ಲಿ ಗುತ್ತಿಗೆದಾರ ಕಂಪನಿ ಭೀಮಾ ತೀರದಲ್ಲಿ ನಿಯಮ ಮೀರಿ ಮರಳು ತೆಗೆದಿರುವುದರು ಹಾಗೂ ಆಳ ಇರುವ ಕಡೆಗಳಲ್ಲಿ ಎಚ್ಚರಿಕೆಯ ನಾಮ ಫಲಕಗಳನ್ನು ಅಳವಡಿಸದೇ ನಿರ್ಲಕ್ಷಿಸಿದ್ದು, ಮಕ್ಕಳ ಸಾವಿಗೆ ಕಾರಣ ಎಂದು ತೀರ್ಮಾನಿಸಿ ಪರಿಹಾರಕ್ಕೆ ಆದೇಶ ನೀಡಿದೆ.

ಅದರಂತೆ ಪ್ರತಿ ಕುಟುಂಬಕ್ಕೆ ತಲಾ 25 ಲಕ್ಷ ರೂ.ದಂತೆ ಪರಿಹಾರ ಧನ ನೀಡಬೇಕು ಎಂದು ನ್ಯಾಯಾಧೀಶ ಆದರ್ಶಕುಮಾರ ಗೋಯಲ್‌, ಜಾವೇದ್‌ ರಹೀಂ, ಎಸ್‌.ಪಿ.ವಾಗಂಡಿ, ಡಾ.ನಾಗೀನ್‌ ನಂದ ನೇತೃತ್ವದ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಪೀಠ ತಿಳಿಸಿದೆ. (ಎಂ.ಎನ್)

Leave a Reply

comments

Related Articles

error: