ಮೈಸೂರು

ಕಲಾವಿದರಿಗೆ ಸಾಮಾಜಿಕ ಬದ್ಧತೆ ಇರಬೇಕು : ನಟ ಪ್ರಕಾಶ್ ರೈ

ಮೈಸೂರು, ಅ.5 : ಕಲಾವಿದ ಒಬ್ಬ ಶಿಲ್ಪಿ, ಚಿತ್ರಕಾರ, ಬರಹಗಾರನಂತಿದ್ದು, ತಮಗೆ ಅಭಿಮಾನಿಗಳಿದ್ದಾರೆ, ಏನು ಬೇಕಾದರೂ ಮಾಡಬಹುದು ಎಂಬ ಅಹಂ ಇದ್ದಲ್ಲಿ ಜನರು ತಿರಸ್ಕರಿಸುವ ಕಾರಣ ನಡೆನುಡಿಯಲ್ಲಿ ಸಾಮಾಜಿಕ ಬದ್ಧತೆ ಇರಬೇಕಾಗುತ್ತದೆಂದು ಬಹುಭಾಷಾ ನಟ ಪ್ರಕಾಶ್ ರೈ ಅಭಿಪ್ರಾಯಪಟ್ಟರು.

ಅ. 7 ರಂದು ನಗರದ ಮಾನಸ ಗಂಗೋತ್ರಿ ಮಾನವಿಕ ಸಭಾಂಗಣದಲ್ಲಿ ನಡೆಯಲಿರುವ ತಮ್ಮ ಅವರವರ ಭಾವಕ್ಕೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ಕುರಿತಂತೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಕೆಲ ಚಿತ್ರನಟರು ತಮ್ಮ ಒರಟು ನಡವಳಿಕೆ ಕಾರಣ ಸುದ್ದಿಗೀಡಾದ ಬಗೆಗಿನ ಪ್ರಶ್ನೆಗೆ ಉತ್ತರಿಸಿದರು.

ತಮ್ಮ ನಡವಳಿಕೆಯನ್ನು ವೈಯಕ್ತಿಕ ಬದುಕು ಎಂದು ಹೇಳಿ ಯಾವ ಕಲಾವಿದನೂ ನುಣುಚಿಕೊಳ್ಳುವ ಹಾಗಿಲ್ಲ. ಕೆಲವರನ್ನು ಸಮಾಜ ಪ್ರಶ್ನಿಸಬೇಕಾಗುತ್ತದೆ. ಅದು ಸಮುದಾಯದ ಕರ್ತವ್ಯವೂ ಆಗಿದೆ ಎಂದ ಅವರು, ಇನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಜಸ್ಟ್ ಆಸ್ಕಿಂಗ್ ಸಂಘಟನೆ ಪಾತ್ರ ಕುರಿತಂತೆ, ತಾವು ರಾಜಕಾರಣಿ ಅಲ್ಲ. ಸಂದರ್ಭ ಬಂದಾಗ ಒಬ್ಬ ಮನುಷ್ಯ ಪ್ರಶ್ನಿಸಬೇಕಾದ ಕರ್ತವ್ಯದ ಅಡಿಯಲ್ಲಿ ಹಿಂದಿನ ವಿಧಾನಸಭಾ ಚುನಾವಣೆ ವೇಳೆ ಪ್ರಶ್ನಿಸಿದ್ದಾಗಿ ನುಡಿದರು.

ಜೊತೆಗೆ, ಈಗ ತಮ್ಮ ಸಂಘಟನೆ ಕಾರ್ಯಕರ್ತರು ಇನ್ನಿತರ ಸಂಘಟನೆಗಳ ಸಹಯೋಗದಲ್ಲಿ ರಾಜ್ಯದ ವಿವಿಧೆಡೆ ಕೆಲ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ, ಸೌಲಭ್ಯ ಮೊದಲಾದವುಗಳಲ್ಲಿ ತೊಡಗಿರುವುದಾಗಿ ನುಡಿದರು.

ಇನ್ನು ಮೂರು ದಶಕಗಳಿಗೂ ಮೀರಿ ಚಿತ್ರರಂಗದಲ್ಲಿರುವ ತಮ್ಮಲ್ಲಿ ಗ್ರಹಿಕೆ, ಪ್ರತಿಕ್ರಿಯೆ, ಅಂತರ್ಜಲದ ಗುಣ ಎಷ್ಟರ ಮಟ್ಟಿಗೆ ಇದೆ ಎನ್ನುವುದು ಅಂಕಣಕ್ಕಾಗಿ ಬರೆಯುವ ವೇಳೆ ಅನುಭವಕ್ಕೆ ಬಂದಿತೆಂದು ವಿವರಿಸಿದರು.

‌ನಾನು ಪುಸ್ತಕ ಬರೆಯುವ ಚಿಂತನೆಯಲ್ಲಿ ಇರಲಿಲ್ಲ. ಗೆಳೆಯರ ಸಲಹೆ ಮೇರೆಗೆ ಪುಸ್ತಕ ಬರೆದೆ. ಬರೆದ ಮೇಲೆ ತಿಳಿದದ್ದು ಅದರ ಏಕಾಂತದ ಅನುಭವ ಹೇಗಿದೆ ಅಂತ. ನನಗೆ ಮೈಸೂರು ತುಂಬಾ ಇಷ್ಟದ ಊರು. ಅದಕ್ಕಾಗಿ ಇಲ್ಲೆ ಪುಸ್ತಕ ಬಿಡುಗಡೆ ಮಾಡ್ತಿದ್ದೀನಿ‌. (ವರದಿ : ಕೆ.ಎಂ.ಆರ್)

Leave a Reply

comments

Related Articles

error: