ಪ್ರಮುಖ ಸುದ್ದಿ

ನಿವೃತ್ತ ಡಿವೈಎಸ್ಪಿಯ ಪುತ್ರನಿಂದ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ

ರಾಜ್ಯ(ಬೆಂಗಳೂರು)ಅ.4:-  ಕ್ಷುಲ್ಲಕ ಕಾರಣಕ್ಕೆ ನಿವೃತ್ತ ಡಿವೈಎಸ್ಪಿಯ ಪುತ್ರ ಮತ್ತು ಆತನ ಗ್ಯಾಂಗ್ ವ್ಯಕ್ತಿಯೋರ್ವನಿಗೆ ಮಾರಣಾಂತಿಕ ಹಲ್ಲೆ ನಡೆಸಿ ಕ್ರೌರ್ಯ ಮೆರೆದಿರುವ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಕಮ್ಮಗೊಂಡನಹಳ್ಳಿ ನಿವಾಸಿ ಯುವರಾಜ್ ಹಲ್ಲೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಸೆ.8ರಂದು ರಾತ್ರಿ 10ರ ಸುಮಾರಿಗೆ ಯುವರಾಜ್ ತನ್ನ ಗೆಳೆಯ ಕಾರ್ತಿಕ್  ಜತೆ ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ರಿನೈಸಾನ್ಸ್ ಪಂಚತಾರ ಹೊಟೇಲ್​ನಲ್ಲಿ  ಊಟಕ್ಕೆಂದು ತೆರಳಿದ್ದರು. ಊಟ ಸೇವಿಸಿ ಬಳಿಕ ಯುವರಾಜ್ ಕೈ ತೊಳೆದು ವಾಪಸ್ಸಾಗುತ್ತಿದ್ದ ವೇಳೆ ಎದುರಿನಿಂದ ಬಂದ ನಿವೃತ್ತ ಡಿವೈಎಸ್ಪಿ ಪುತ್ರ ಜಕ್ಕೂರು ನಿವಾಸಿ ಸುಮನ್‌ ಗೆ ಕೈ ತಾಗಿತ್ತು. ಇದಕ್ಕೆ ಆಕ್ರೋಶಗೊಂಡ ಸುಮನ್, “ಏಯ್ ನೋಡ್ಕೊಂಡು ಬರೋದಕ್ಕೆ ಆಗೋದಿಲ್ವಾ” ಎಂದು ಯುವರಾಜ್ ಬಳಿ ರೇಗಾಡಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ, ಸುಮನ್ ಸಹಚರರಾದ ಅಶೋಕ್‌, ಹರಿಕೃಷ್ಣ ಹಾಗೂ ವಿಕ್ರಮ್‌ ಸೇರಿ ಯುವರಾಜ್ ಗೆ ಬಿಯರ್ ಬಾಟಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಬಳಿಕ ತೀವ್ರಗಾಗೊಂಡು ಕುಸಿದು ಬಿದ್ದಿದ್ದ ಯುವರಾಜ್ ನನ್ನು ಸ್ನೇಹಿತ ಕಾರ್ತಿಕ್ ನಗರದ ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಹೈಗ್ರೌಂಡ್ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ಕಾರಿನ ನಂಬರ್ ಮೂಲಕ ಪತ್ತೆಗೆ ಮುಂದಾದ ಪೊಲೀಸರು, ಜಕ್ಕೂರಿನ ನಿವಾಸಕ್ಕೆ ತೆರಳಿ ವಿಚಾರಣೆ ನಡೆಸಿದಾಗ ನಿವೃತ್ತ ಡಿವೈಎಸ್ಪಿ ಕೋನರೆಡ್ಡಿ ಅವರ ಪುತ್ರ ಸುಮನ್ ಎಂಬ ಮಾಹಿತಿ ಲಭ್ಯವಾಗಿದೆ. ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಆರೋಪಿ ಸುಮನ್ ಹಾಗೂ ಸಹಚರರ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಆರೋಪಿಗಳು ದಿಲ್ಲಿ, ಹರಿಯಾಣ, ಗೋವಾ ಭಾಗಕ್ಕೆ ಪ್ರಯಾಣ ಬೆಳೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

 

 

Leave a Reply

comments

Related Articles

error: