ಪ್ರಮುಖ ಸುದ್ದಿ

ಸಾಲಮನ್ನಾಕ್ಕೆ ಆಗ್ರಹ : ಮಡಿಕೇರಿಯಲ್ಲಿ ಮಹಿಳಾ ಕಾರ್ಮಿಕರ ಪ್ರತಿಭಟನೆ

ರಾಜ್ಯ(ಮಡಿಕೇರಿ)ಅ.6 :- ಹಣಕಾಸು ಸಂಸ್ಥೆಗಳಲ್ಲಿ ಸ್ವ-ಸಹಾಯ ಸಂಘಗಳ ಮೂಲಕ ಕಾರ್ಮಿಕರು ಮಾಡಿರುವ ಸಾಲವನ್ನು ಮನ್ನಾಮಾಡಬೇಕು ಮತ್ತು ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಇಲ್ಲದವರಿಗೆ ಕೂಲಿಯನ್ನು ಸೃಷ್ಟಿಸಬೇಕೆಂದು ಒತ್ತಾಯಿಸಿ ರೈತ ಕೃಷಿ ಕಾರ್ಮಿಕರ ಸಂಘಟನೆ ಮತ್ತು ಎಐಯುಟಿಯುಸಿ ಸಂಘಟನೆಗಳು ಜಂಟಿಯಾಗಿ ಜಿಲ್ಲಾಡಳಿತ ಕಛೇರಿ ಮುಂಭಾಗ ಪ್ರತಿಭಟನೆ  ನಡೆಸಿದವು.

ಎಐಯುಟಿಯುಸಿ ಸಂಚಾಲಕರಾದ ಬಿ.ರವಿ, ಆರ್.ಕೆ.ಎಸ್‍ನ ರಾಜ್ಯ ಉಪಾಧ್ಯಕ್ಷರಾದ ಎಂ. ಶಶಿಧರ್ ಅವರ ನೇತೃತ್ವದಲ್ಲಿ  ಜಿಲ್ಲೆಯ ವಿವಿಧೆಡೆಗಳಿಮದ ಆಗಮಿಸಿದ್ದ ಕಾರ್ಮಿಕರು ಪ್ರತಿಭಟನೆ ನಡೆಸಿ,  ಬೇಡಿಕೆಗಳ ಮನವಿಯನ್ನು ಜಿಲ್ಲಾಡಳಿತಕ್ಕೆ  ಸಲ್ಲಿಸಿದರು.

ಈ ಸಂದರ್ಭ ಎಐಯುಟಿಯುಸಿ ಸಂಚಾಲಕರಾದ ಬಿ.ರವಿ ಮಾತನಾಡಿ, ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ  ಆಸ್ತಿಪಾಸ್ತಿಗಳಿಗೆ ಅಪಾರ ಹಾನಿಯುಂಟಾಗಿದೆ. ಇದರಿಂದ ಕೆಲಸ ಕಾರ್ಯಗಳು ಇಳಿಮುಖಗೊಂಡು, ಕೂಲಿ ಕೆಲಸವನ್ನು ನಂಬಿದ್ದ ಕಾರ್ಮಿಕ ವರ್ಗ ಕೆಲಸವಿಲ್ಲದೆ ಕಂಗಾಲಾಗಿದೆಯೆಂದು ಕಳವಳ ವ್ಯಕ್ತಪಡಿಸಿ, ಜಿಲ್ಲಾಡಳಿತ ಮನೆ, ಆಸ್ತಿ ಕಳೆದುಕೊಂಡವರನ್ನು ಮಾತ್ರ ಸಂತ್ರಸ್ತರೆಂದು ಪರಿಗಣಿಸಿ, ಕೂಲಿ ಕಳೆದುಕೊಂಡವರನ್ನು ಸಂತ್ರಸ್ತರೆಂದು ಪರಿಗಣಿಸದೆ ಇರುವುದು ಖಂಡನೀಯ ಎಂದರು.

ಸರ್ಕಾರಿ ಮತ್ತು ಖಾಸಗಿ ಸ್ವ-ಸಹಾಯ ಸಂಘಗಳಲ್ಲಿ ಮಾಡಿದ ಸಾಲದ ಕಂತನ್ನು ಪ್ರತಿ ವಾರ ಕಟ್ಟುವ ಹೊರೆಯೂ ಕೂಲಿ ಕಾರ್ಮಿಕರ ಮೇಲಿದ್ದು, ಕೆಲಸ ಇಲ್ಲದ ಹಿನ್ನೆಲೆಯಲ್ಲಿ ಹಿಂದೆ ಮಾಡಿದ ಸಾಲದ ಹೊರೆ ಹಾಗೆಯೇ ಉಳಿದಿದೆ. ಆದ್ದರಿಂದ ಜಿಲ್ಲಾಡಳಿತ ತಕ್ಷಣವೇ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಕೂಲಿ ಇಲ್ಲದವರಿಗೆ ಕೂಲಿಯನ್ನು ಸೃಷ್ಟಿಸಬೇಕು, ಕನಿಷ್ಠ ಒಂದು ವರ್ಷದವರೆಗೆ ಸರ್ಕಾರಿ ಮತ್ತು ಖಾಸಗಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳಲ್ಲಿ ಸ್ವ-ಸಹಾಯ ಸಂಘಗಳ ಮೂಲಕ ಮಾಡಿರುವ ಸಾಲದ ವಸೂಲಾತಿಗೆ ಅಧಿಕೃತವಾಗಿ ತಡೆಯೊಡ್ಡಬೇಕು ಮತ್ತು ಈ ಅವಧಿಯ ಬಡ್ಡಿಯನ್ನು ಮನ್ನಾ ಮಾಡಬೇಕು, ಸಾಲ ವಸೂಲಿಗೆ ನೀಡುವ ಕಿರುಕುಳವನ್ನು ಗಂಭೀರ ಅಪರಾಧವೆಂದು ಪರಿಗಣಿಸಬೇಕು, ಮನೆ ಕಳೆದುಕೊಂಡವರಿಗೆ  ಸೂಕ್ತ ಪರಿಹಾರ  ಮತ್ತು ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕು, ಜಿಲ್ಲೆಯ ಹಲವಾರು ಪ್ರಾಥಮಿಕ ವೈದ್ಯಕೀಯ ಕೇಂದ್ರದಲ್ಲಿ ವೈದ್ಯರಿಲ್ಲದೆ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಅಂತಹ ವೈದ್ಯಕೀಯ ಕೇಂದ್ರಗಳಿಗೆ ಸಂಚಾರಿ ವೈದ್ಯರ ತಂಡವನ್ನು ವಾರಕ್ಕೊಮ್ಮೆಯಾದರೂ ಕಳುಹಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತ ಕೃಷಿ ಕಾರ್ಮಿಕ ಸಂಘಟನೆಯ ಸದಸ್ಯರಾದ ಸುಮ, ಸುನಿಲ್, ಆಶಿಯ, ನಾಗಮಣಿ ಹಾಗೂ ಆಶಾ ಕಾರ್ಯಕರ್ತೆ ಲೀಲಾ ಮತ್ತಿತರರು ಪಾಲ್ಗೊಂಡಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: