ಪ್ರಮುಖ ಸುದ್ದಿ

ಸಂಪಾಜೆಯಲ್ಲಿ ಜನ ಸಂಪರ್ಕ ಸಭೆ : ಗ್ರಾಮಸ್ಥರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ಶ್ರೀವಿದ್ಯಾ : 129 ಅರ್ಜಿ ಸ್ವೀಕಾರ

ರಾಜ್ಯ(ಮಡಿಕೇರಿ) ಅ.6 :- ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರ ಅಧ್ಯಕ್ಷತೆಯಲ್ಲಿ ಸಂಪಾಜೆಯ ವಿ.ಎಸ್.ಎಸ್.ಎನ್. ಸಭಾಂಗಣದಲ್ಲಿ ಜನಸಂಪರ್ಕ ಸಭೆ ನಡೆಯಿತು. ಜನಸಂಪರ್ಕ ಸಭೆಯಲ್ಲಿ ಸುಮಾರು 129 ಅರ್ಜಿಗಳು ಸಲ್ಲಿಕೆಯಾದವು.

ವ್ಯಾಪಕ ಮಳೆಯಿಂದಾಗಿ ಮನೆ ಹಾನಿ, ರಸ್ತೆ ಮತ್ತು ಸೇತುವೆ ಹಾನಿಯಾಗಿದ್ದು ಇದನ್ನು ಸರಿಪಡಿಸುವಂತಾಗಬೇಕು. ಕುಡಿಯುವ ನೀರು ಒದಗಿಸಬೇಕು. ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಹಾನಿಯಾಗಿದ್ದು, ಸೂಕ್ತ ಪರಿಹಾರ ವಿತರಿಸುವಂತಾಗಬೇಕು ಎಂದು ಸಾರ್ವಜನಿಕರು ಮನವಿ ಮಾಡಿದರು.

ಸಾರ್ವಜನಿಕರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಅರ್ಜಿಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ತುರ್ತು ಕ್ರಮವಹಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಧೋರಣೆ ಅನುಸರಿಸಬಾರದು. ಮನೆ ಹಾನಿ, ಬೆಳೆ ಹಾನಿ ಸಂಬಂಧಿಸಿದಂತೆ ಕೂಡಲೇ ಕ್ರಮ ವಹಿಸಬೇಕು ಎಂದರು.    ಸರ್ಕಾರದಿಂದ ಮನೆ ನಿರ್ಮಿಸಿಕೊಡಲಾಗುವುದು. ರಸ್ತೆ, ಸೇತುವೆ ಹಾನಿಯಾಗಿದ್ದಲ್ಲಿ ಸರಿಪಡಿಸಲಾಗುವುದು. ಕೃಷಿ, ತೋಟಗಾರಿಕೆ ಬೆಳೆಗಳಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ತಿಳಿಸಿದರು.

ಸರ್ಕಾರದ ವತಿಯಿಂದ ಸಂತ್ರಸ್ತರಿಗೆ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅವರು ತಿಳಿಸಿದರು. ಸಂತ್ರಸ್ತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜನ ಸಂಪರ್ಕ ಸಭೆಗೆ ಹಾಜರಾಗಿ ಅಹವಾಲು ಸಲ್ಲಿಸಿದರು.

ತಹಶೀಲ್ದಾರ್ ಕುಸುಮ, ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು, ಕಂದಾಯ ಇಲಾಖೆ ಅಧಿಕಾರಿಗಳು ಇತರರು ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: