
ಮೈಸೂರು
ಸಂಪುಟ ಪುನರಚನೆ ವಿಚಾರದಲ್ಲಿ ತಕರಾರಿಲ್ಲ ಇರುವ ಖಾತೆಯಲ್ಲೆ ಖುಷಿಯಾಗಿದ್ದೇನೆ : ಸಚಿವ ಜಿ.ಟಿ ದೇವೇಗೌಡ ಸ್ಪಷ್ಟನೆ
ಮೈಸೂರು,ಅ.6:- ಸಂಪುಟ ಪುನರಚನೆ ವಿಚಾರದಲ್ಲಿ ತಕರಾರಿಲ್ಲ. ಇರುವ ಖಾತೆಯಲ್ಲೆ ಖುಷಿಯಾಗಿದ್ದೇನೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ಸ್ಪಷ್ಟನೆ ನೀಡಿದ್ದಾರೆ.
ಮೈಸೂರಿನಲ್ಲಿ ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು ಉನ್ನತ ಶಿಕ್ಷಣ ಖಾತೆ ನಿಭಾಯಿಸುವ ವಿಶ್ವಾಸ ಬಂದಿದೆ. ನನಗೆ ಕಂದಾಯ ಖಾತೆ ಇಷ್ಟ ಇತ್ತು. ಆ ಖಾತೆ ಕಾಂಗ್ರೆಸ್ ನವರ ಬಳಿ ಇತ್ತು. ಮುಖ್ಯಮಂತ್ರಿಗಳು ಅವರಿಂದ ಕೊಡಿಸಬಹುದು ಎಂದು ಕಾದಿದ್ದೆ. ಆದರೆ ಅದು ಆಗಲಿಲ್ಲ. ಈಗ ನನಗಾಗಲಿ ಸಾ.ರಾ.ಮಹೇಶ್ ಗಾಗಲಿ ಬೇರೆ ಖಾತೆ ಅಗತ್ಯ ಇಲ್ಲ ಎಂದರು.
ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಟೇಜ್ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು ಸ್ಟೇಜ್ ಗೆ ಸಂಬಂಧಿಸಿದಂತೆ ಪ್ರಮೋದಾ ದೇವಿ ಒಡೆಯರ್ ಆಕ್ಷೇಪ ವ್ಯಕ್ತಪಡಿಸಿರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗ ಮಾತನಾಡಿದ್ದೇನೆ. ಮಳೆಯ ಕಾರಣದಿಂದ ಮುಚ್ಚಿದ ಸ್ಟೇಜ್ ನಿರ್ಮಾಣ ಮಾಡಲಾಗಿತ್ತು. ಅದರಿಂದ ಅರಮನೆಯ ಆನೆ ಒಂಟೆ ಓಡಾಡಲು ತೊಂದರೆ ಎಂದು ಹೇಳಿದ್ದರು. ಹೀಗಾಗಿ ವೇದಿಕೆಯಲ್ಲಿ ಮಾರ್ಪಾಡು ಮಾಡಲಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ಮೆಟ್ರೊಪೊಲೊ ಸರ್ಕಲ್ ಬಳಿ ದೀಪಾಲಂಕಾರ ಸಿದ್ಧತೆ ಪರಿಶೀಲಿಸಿದರು. (ಕೆ.ಎಸ್,ಎಸ್.ಎಚ್)