ಮೈಸೂರು

ದಲಿತರು ರಾಜಕೀಯ ಹುನ್ನಾರಕ್ಕೆ ಮಣಿಯಬಾರದು: ಹರಿಹರ ಆನಂದಸ್ವಾಮಿ

ಮೈಸೂರು,ಅ.6-ದಲಿತರು ರಾಜಕೀಯ ಹುನ್ನಾರಕ್ಕೆ ಮಣಿಯದೇ, ಎಚ್ಚೆತ್ತುಕೊಳ್ಳಬೇಕು. ಧರ್ಮ,ಜಾತಿ,ಅಸ್ಪೃಶ್ಯತೆ ಇವು ದೇಶದ ಮಾನಸಿಕ ರೋಗವಾಗಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹರಿಹರ ಆನಂದಸ್ವಾಮಿ ಹೇಳಿದರು.

ದೇವರಾಜು ಅರಸುರವರ 103ನೇ ಜನ್ಮದಿನದ ಪ್ರಯುಕ್ತ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಜೆಎಲ್ ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ ದಮನಕೋರ-ಜಾತಿವಾದಿ-ಕೋಮುವಾದಿ ಶಕ್ತಿಯ ವಿರುದ್ಧ ದಲಿತ-ಹಿಂದುಳಿದ ಅಲ್ಪಸಂಖ್ಯಾತರ ಒಗ್ಗಟ್ಟಿನ ಹೋರಾಟ ಕುರಿತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಶೋಷಿತ ಸಮುದಾಯಗಳು ಜಾಗೃತಿಯನ್ನು ಕಳೆದುಕೊಂಡಿದ್ದು, ರಾಜಕೀಯ ಪಕ್ಷಗಳು ದಲಿತರನ್ನು ಕೇವಲ ಮತಗಳೆಂದು ಪರಿಗಣನೆಗೆ ತೆಗೆದುಕೊಂಡಿದೆ. ಆಂಧ್ರ, ಕೇರಳ ಈ ಕಡೆಗಳಲ್ಲಿ ನಿತ್ಯ ಅತ್ಯಾಚಾರ, ಅಕ್ರಮ ಪ್ರವೇಶಾತಿ, ಮೀಸಲಾತಿ ವಂಚನೆ ಇವುಗಳೇ ಹೆಚ್ಚು ಸುದ್ದಿಯಾಗುತ್ತಿದೆ. ಮಾಧ್ಯಮಗಳು ದಲಿತರನ್ನು ಒಂದು ವಸ್ತುವಾಗಿ ಪರಿಗಣಿಸಿ ಸುದ್ದಿಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಬಸವಣ್ಣ ಅವರ ಚಿಂತನೆಗಳನ್ನು ಅಳವಡಿಸಿಕೊಂಡು ಒಳಿತು ಮಾಡಬೇಕು ಎಂದರು.

ಹಂಚೀಪುರ ಜಿಪಂ ಸದಸ್ಯ ವೆಂಕಟಸ್ವಾಮಿ ಮಾತನಾಡಿ, ಅರಸು ಅವರು ಮಹಾನ್ ನಾಯಕರಾಗಿದ್ದು, ಉಳುವವನೇ ಭೂಮಿಯ ಒಡೆಯ, ಗೇಣಿ ಪದ್ಧತಿಗಳನ್ನು ಜಾರಿಗೆ ತಂದು ಜಾತಿ ಪದ್ಧತಿ ನಿರ್ಮೂಲನೆಗಾಗಿ ಹೋರಾಟ ನಡೆಸಿದರು. ಅಲ್ಲದೆ, ದಲಿತರನ್ನು ರಾಜಕಾರಣಕ್ಕೆ ತಂದರು. ಆದ್ದರಿಂದ ಅಂಬೇಡ್ಕರ್ ಜೊತೆಯಲ್ಲಿ ಅರಸು ಅವರನ್ನು ನೆನೆಯಬೇಕು ಎಂದರು.

ಹುಣಸೂರಿನ ದೇವರಾಜ ಅರಸು ಕೋಆಪರೇಟಿವ್ ಸೊಸೈಟಿ ಅಧ್ಯಕ್ಷ ಬಿಳಿಕೆರೆ ರಾಜು, ಮೈಸೂರಿನ ಎಪಿಎಂಸಿ ಸದಸ್ಯ ಚಿಕ್ಕಜವರಯ್ಯ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಎಂ.ಬಿ.ಶ್ರೀನಿವಾಸ್ ಮಂಡ್ಯ, ಪತ್ರಕರ್ತ ಸೋಮಯ್ಯ ಮಲಿಯೂರು ಇತರರು ಉಪಸ್ಥಿತರಿದ್ದರು. (ಎಂ.ಎನ್)

Leave a Reply

comments

Related Articles

error: