
ಮೈಸೂರು
ನಾಲ್ಕನೇ ದಿನ ಪೂರೈಸುತ್ತಿದೆ ಪೌರಕಾರ್ಮಿಕರ ಧರಣಿ : ಪ್ಲಾಸ್ಟಿಕ್ ಸೇವಿಸುತ್ತಿರುವ ಹಸುಗಳು; ಸಮಸ್ಯೆಗೆ ಕೊನೆ ಎಂದು
ಮೈಸೂರು,ಅ.6:- ಮೈಸೂರು ಮಹಾನಗರ ಪಾಲಿಕೆಯ ಎದುರು ಪೌರಕಾರ್ಮಿಕರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದು, ನಾಲ್ಕನೇ ದಿನ ಪೂರೈಸುತ್ತಿದೆ. ನಗರವೆಲ್ಲ ಗಬ್ಬೆದ್ದು ನಾರುತ್ತಿದೆ.
ನಿನ್ನೆ ಸಚಿವದ್ವಯರು ಪೌರಕಾರ್ಮಿಕರ ಬಳಿ ತೆರಳಿ ಸಂಧಾನಕ್ಕೆ ಯತ್ನ ನಡೆಸಿದ್ದರಾದರೂ ಸಂಧಾನ ವಿಫಲವಾಗಿದೆ. ಪೌರಕಾರ್ಮಿಕರನ್ನು ಇಂದು ಯಾವ ಅಧಿಕಾರಿಗಳೂ ಭೇಟಿಯಾದ ಕುರಿತು ವರದಿಯಾಗಿಲ್ಲ. ಕುವೆಂಪುನಗರಸ ಪೊಲೀಸ್ ಠಾಣೆಯ ಹಿಂಬದಿಯ ಕಂಟೇನರ್ ಬಳಿ ಕಸ ತಂದು ಸುರಿಯಲಾಗುತ್ತಿದ್ದು, ವಾಸನೆ ಮೂಗಿಗೆ ಬಡಿಯುತ್ತಿದೆ. ಈ ಕುರಿತು ಸ್ಥಳೀಯರು ಮಾತನಾಡಿ ನಾವು ಹಸುಗಳನ್ನು ಕಟ್ಟಿದ್ದೇವೆ. ಸ್ವಲ್ಪ ಕಾಲು ಆಡಿಸಿ ಬರಲೆಂದು ಅವುಗಳನ್ನು ಬಿಡುತ್ತೇವೆ. ಆದರೆ ಹಸುಗಳು ಇಲ್ಲಿ ಬಂದು ಪ್ಲಾಸ್ಟಿಕ್ ತ್ಯಾಜ್ಯ ಸೇವಿಸುತ್ತಿರುವುದು ಕಂಡು ಬಂದಿದೆ. ಕಸ ಕಡ್ಡಿಗಳು ಇದೇ ರೀತಿ ರಾಶಿ ಬಿದ್ದು, ನಮ್ಮ ಹಸುಗಳಿಗೇನಾದರೂ ಸಂಭವಿಸಿದರೆ ಅದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಲಕ್ಷಾಂತರ ರೂ.ಕೊಟ್ಟು ಹಸು ಖರೀದಿಸುತ್ತೇವೆ. ಪ್ಲಾಸ್ಟಿಕ್ ಸೇವಿಸುವುದರಿಂದ ಹಸುಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ. ದಸರಾ ಸಮೀಪದಲ್ಲಿಯೇ ಇದ್ದು ದಸರಾಕ್ಕೆ ಸರಿಯಾಗಿ ರೋಗ ರುಜಿನಗಳು ವಕ್ಕರಿಸುವ ಎಲ್ಲಾ ಸಾಧ್ಯತೆಗಳು ಮೈಸೂರು ನಗರಿಗರನ್ನು ಕಾಡುತ್ತಿದೆ. ಇದು ಕೇವಲ ಕುವೆಂಪುನಗರದ ಬಳಿಯ ಸಮಸ್ಯೆಯಲ್ಲ. ಮೈಸೂರಿಗೆ ಮೈಸೂರೇ ಕಸದ ರಾಶಿಯಾಗಿ ಮಾರ್ಪಟ್ಟಿದೆ. ಸಾರ್ವಜನಿಕರೂ ಕೂಡ ಪ್ರತಿಭಟನೆಗಿಳಿಯುವ ಮುನ್ನ ಸರ್ಕಾರ ಪೌರಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿದರೆ ಒಳ್ಳೆಯದು. (ಕೆ.ಎಸ್,ಎಸ್.ಎಚ್)