ದೇಶಪ್ರಮುಖ ಸುದ್ದಿ

ಆಸ್ಪತ್ರೆಯ ಸಿಸಿಟಿವಿ ಆಫ್ ಆಗಿದ್ದೇಕೆ? ಜಯಲಲಿತಾ ಸಾವು ಪ್ರಕರಣದಲ್ಲಿ ಅಫಿಡವಿಟ್

ಚೆನ್ನೈ (ಅ.6): ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನ ಆಸ್ಪತ್ರೆಯ ಸಿಸಿಟಿವಿಗಳನ್ನು ಆಫ್ ಮಾಡುವಂತೆ ಪೊಲೀಸರೇ ಸೂಚಿಸಿದ್ದರು ಎಂದು ಅಪೋಲೋ ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ. ಈ ಮೂಲಕ ಜಯಲಲಿತಾ ನಿಧನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಂತಾಗಿದೆ. ಜಯಲಲಿತಾ ಅವರ ನಿಧನಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ನೇಮಿಸಲಾದ ಆರ್ಮುಗಸ್ವಾಮಿ ಆಯೋಗಕ್ಕೆ ಅಪೋಲೋ ಆಸ್ಪತ್ರೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಈ ಹೇಳಿಕೆ ದಾಖಲಾಗಿದೆ.

ಗುಪ್ತಚರ ವಿಭಾಗದ ಐಜಿ ಕೆ.ಎನ್. ಸತಿಯಮೂರ್ತಿ ಸೇರಿದಂತೆ ನಾಲ್ವರು ಉನ್ನತ ಪೊಲೀಸ್ ಅಧಿಕಾರಿಗಳೇ ಸಿಸಿಟಿವಿ ಕ್ಯಾಮರಾವನ್ನು ಆಫ್ ಮಾಡುವಂತೆ ಮನವಿ ಮಾಡಿಕೊಂಡಿದ್ದರು ಎಂದು ಅಪೋಲೋ ಆಸ್ಪತ್ರೆಯ ವ್ಯವಸ್ಥಾಪಕ ಮಂಡಳಿ ಹೇಳಿದೆ. ಜಯಲಲಿತಾ ಅವರನ್ನು ಆಸ್ಪತ್ರೆಗೆ ಕರೆತರುವಾಗ ಸಿಸಿತಿವಿ ಕ್ಯಾಮರಾವನ್ನು ಆಫ್ ಮಾಡಲಾಗಿತ್ತು. ನಂತರ ಅವರನ್ನು ಚಿಕಿತ್ಸೆಯ ಕೊಠಡಿಗೆ ಕರೆದೊಯ್ದ ನಂತರ ಸಿಸಿಟಿವಿಯನ್ನು ಆನ್ ಮಾಡಲಾಯಿತು ಎಂದು ಅದು ಹೇಳಿದೆ.

ಇಂದಿನ ತಂತ್ರಜ್ಞಾನದ ಯುಗದಲ್ಲಿ ಯಾವುದೇ ತನಿಖೆಯ ಸಂದರ್ಭಗಳಲ್ಲೂ ಸಿಸಿಟಿವಿ ಕ್ಯಾಮರಾಗಳು ಬಹಳ ಮಹತ್ವದ ಪಾತ್ರ ವಹಿಸುತ್ತವೆ. ಅಪೋಲೋದಂಥ ಮಲ್ಟಿಸ್ಪೆಷಾಲಲಿಟಿ ಆಸ್ಪತ್ರೆಗಳಲ್ಲೂ ಆಗಿನ ಮುಖ್ಯಮಂತ್ರಿಗಳು ದಾಖಲಾಗಿದ್ದ ಸಮಯದಲ್ಲಿ ಸಿಸಿಟಿವಿ ಕ್ಯಾಮರಾ ಕೆಲಸ ನಿರ್ವಹಿಸುತ್ತಿರಲಿಲ್ಲ ಎಂಬುದು ಅನುಮಾನ ಹುಟ್ಟಿಸಿತ್ತು. ಆದರೆ ಸಿಸಿಟಿವಿ ಕ್ಯಾಮರಾ ಕೆಟ್ಟಿರಲಿಲ್ಲ. ಆದರೆ ಅದನ್ನು ಉದ್ದೇಶಪೂರ್ವಕವಾಗಿಯೇ ಆಫ್ ಮಾಡಲಾಗಿತ್ತು ಎಂಬುದು ಅಪೋಲೋ ಆಸ್ಪತ್ರೆಯ ಹೇಳಿಕೆಯಿಂದ ಸಾಬೀತಾಗಿದೆ. ಅಲ್ಲದೆ ಈ ಸಿಸಿಟಿವಿಗಳನ್ನು ಸ್ವತಃ ಪೊಲೀಸರೇ ಆಫ್ ಮಾಡಿಸಿದ್ದರು ಎಂಬ ಆಘಾತಕಾರಿ ಮಾಹಿತಿ ಬೆಚ್ಚಿಬೀಳಿಸಿದೆ.

ಜಯಲಲಿತಾ ಅವರು ಸಾಯುವ ಕೆಲವು ಕ್ಷಣ ಮೊದಲು ಟಿವಿಯಲ್ಲಿ ವೀರ ಹನುಮಾನ್ ಧಾರಾವಾಹಿ ವೀಕ್ಷಿಸುತ್ತಿದ್ದರು ಎಂದು ಇತ್ತೀಚೆಗಷ್ಟೇ ಆರ್ಮುಗಂಸ್ವಾಮಿ ಆಯೋಗಕ್ಕೆ ನೀಡಿದ ಅಫಿಡವಿಟ್ ನಲ್ಲಿ ಜಯಲಲಿತಾ ಅವರ ಸ್ನೇಹಿತೆ ಶಶಿಕಲಾ ನಟರಾಜನ್ ಹೇಳಿಕೆ ನೀಡಿದ್ದರು. ತೀವ್ರ ಹೃದಯಾಘಾತದಿಂದ ಜಯಲಲಿತಾ ಅವರು ಮೃತರಾದರು ಎಂದು ಶಶಿಕಲಾ ಹೇಳಿದ್ದರು.

ಆದರೆ 75 ದಿನಗಳ ಜಯಲಲಿತಾ ಅವರ ಆಸ್ಪತ್ರೆ ವಾಸದಲ್ಲಿ ಒಂದು ದಿನವೂ ಅವರ ಚಿತ್ರವನ್ನು ಆಅಸ್ಪತ್ರೆ ಬಿಡುಗಡೆ ಮಾಡಿರಲಿಲ್ಲ. ಅವರ ಆರೋಗ್ಯದ ಕುರಿತ ಮಾಹಿತಿಯನ್ನೂ ಬಹಿರಂಗ ಪಡಿಸಿರಲಿಲ್ಲ. ಅವರ ಆರೋಗ್ಯದ ಕುರಿತ ಮಾಹಿತಿಯನ್ನು ಗೌಪ್ಯವಾಗಿಯೇ ಇಡಲು ಆಸ್ಪತ್ರೆಯ ಮೇಲೂ ಒತ್ತಡವಿತ್ತು ಎಂಬುದು ಮೂಲಗಳಿಂದ ಸಿಕ್ಕ ಮಾಹಿತಿ.

ಲಕ್ಷಾಂತರ ತಮಿಳರ ಪಾಲಿನ ‘ಅಮ್ಮಾ’ ಯಜಲಲಿತಾ ಅವರ ಸಾವು ನಿಗೂಢತೆಯನ್ನೇ ಉಳಿಸಿಹೋಗಿದೆ. ಡೆಸೆಂಬರ್ 5 ರಂದು ರಾತ್ರಿ ಕೊನೆಯುಸಿರೆಳೆದ ಅವರು ಅದಕ್ಕೂ ಮುನ್ನ ಎರಡೂವರೆ ತಿಂಗಳುಗಳ ಕಾಲ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದರು. ಅವರ ಮನೆಯಲ್ಲಿ ಅವರ ಮೇಲೆ ಹಲ್ಲೆ ನಡೆದಿತ್ತು, ಆದ್ದರಿಂದಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಯ್ತು, ಅವರಿಗೆ ಸ್ಲೋ ಪಾಯ್ಸನ್ ನೀಡಲಾಗುತ್ತಿತ್ತು ಎಂಬಿತ್ಯಾದ ಸಾಕಷ್ಟು ಅಂತೆಕಂತೆಗಳು ಅವರ ಸಾವಿನ ಸುತ್ತ ಸುತ್ತಿಕೊಂಡವು. ಅವರ ಆಪ್ತ ಸ್ನೇಹಿತೆ ಶಶಿಕಲಾ ಅವರ ಮೇಲೆ ಅನುಮಾನ ಹುಟ್ಟಿಕೊಂಡಿತ್ತು. ಆದರೆ ಇದುವರೆಗೂ ಜಯಲಲಿತಾ ಅವರ ಸಾವಿನ ಕುರಿತು ಸ್ಪಷ್ಟ ಮಾಹಿತಿ ನೀಡಬಲ್ಲ ಯಾವ ಸಾಕ್ಷ್ಯವೂ ಸಿಕ್ಕಿಲ್ಲ. (ಎನ್.ಬಿ)

Leave a Reply

comments

Related Articles

error: