ಮೈಸೂರು

ಸಚಿವರ ಭರವಸೆ: ಪ್ರತಿಭಟನೆ ಕೈಬಿಟ್ಟ ಪ್ರತಿಭಟನಕಾರರು

ಮೈಸೂರು,ಅ.6-ಮೈಸೂರು ವಿಶ್ವವಿದ್ಯಾನಿಲಯದಲ್ಲಿದ್ದ ಶೈಕ್ಷಣಿಕ ಅಸ್ಪೃಶ್ಯತೆ ನಿರ್ಮೂಲನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರ ಭರವಸೆ ಮೇರೆಗೆ ಕೈಬಿಡಲಾಗಿದೆ.

ಕಳೆದೆರಡು ದಿನಗಳಿಂದ ಕ್ರಾಫರ್ಡ್ ಭವನದ ಮುಂದೆ ಕೈಗೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ಶನಿವಾರ ಸಂಜೆ ಭೇಟಿ ನೀಡಿದ ಜಿ.ಟಿ.ದೇವೇಗೌಡ ಪ್ರತಿಭಟನಕಾರರೊಂದಿಗೆ ಮಾತನಾಡಿ ಪ್ರತಿಭಟನೆ ಕೈಬಿಡುವಂತೆ ಮಾಡುವಲ್ಲಿ ಸಫಲರಾದರು.

ಈ ವೇಳೆ ಮಾತನಾಡಿದ ಸಚಿವರು, ನಿಮ್ಮ ಬೇಡಿಕೆಗಳನ್ನು ಶೀಘ್ರವೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಕುಲಸಚಿವ ರಾಜಣ್ಣ ಅವರ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳಬೇಕು. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ  ಶೀಘ್ರವೇ ಕ್ರಮಕೈಗೊಳ್ಳುವಂತೆ ತಿಳಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಮಾತನಾಡಿ, ವಿದ್ಯಾರ್ಥಿಗಳ ಮೇಲೆ ದೂರು ದಾಖಲಿಸಿರುವುದು ಸರಿಯಲ್ಲ. ಕುಲಪತಿಗಳ ಅನುಮತಿಯಿಲ್ಲದೇ, ವಿವಿಯೊಳಗೆ ಪೊಲೀಸರು ಹೇಗೆ ಪ್ರವೇಶಿಸುತ್ತಾರೆ ಎಂದು ಪ್ರಶ್ನಿಸಿದರು. ವಿವಿಯಲ್ಲಿ ಕ್ರಿಮಿನಲ್‍ಗಳು ಇಲ್ಲ. ಹಾಗಿದ್ದ ಮೇಲೆ ಅಲ್ಲಿಗೆ ಪೊಲೀಸ್ ಪ್ರವೇಶದ ಅಗತ್ಯವಿಲ್ಲ. ವಿದ್ಯಾರ್ಥಿಗಳ ಮೇಲೆ ದಾಖಲಿಸಿರುವ ದೂರನ್ನು ಹಿಂಪಡೆದು ಸೂಕ್ತ ಮೂಲ ಸೌಲಭ್ಯಗಳನ್ನು ಒದಗಿಸಿಕೊಡಿ ಎಂದರು.

ದಲಿತ ಸಂಘರ್ಷ ಸಮಿತಿ ಸಂಚಾಲಕ ಚೋರ್ನಹಳ್ಳಿ ಶಿವಣ್ಣ ಮಾತನಾಡಿ, ಸಚಿವರಾದ ಜಿ.ಟಿ.ದೇವೇಗೌಡ ಹಾಗೂ ಎನ್.ಮಹೇಶ್ ಅವರ ಭರವಸೆಯ ಮೇರೆಗೆ ಪ್ರತಿಭಟನೆಯನ್ನು ಕೈಬಿಡುತ್ತಿದ್ದೇವೆ. ಶೀಘ್ರವೇ ವಿದ್ಯಾರ್ಥಿಗಳ ಮೇಲೆ ದಾಖಲಿಸಿರುವ ದೂರನ್ನು ಹಿಂಪಡೆಯಬೇಕು ಎಂದರು.

ಮೈಸೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಪ್ರೊ.ಆಯಿಷಾ ಎಂ.ಶರೀಫ್, ಅಧಿಕಾರಿಗಳು, ಸಂಶೋಧಕರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಸೋಸಲೆ ಮಹೇಶ್, ಗೋಪಾಲ್ ಸೇರಿದಂತೆ ಅನೇಕರು ಹಾಜರಿದ್ದರು. (ಎಂ.ಎನ್)

Leave a Reply

comments

Related Articles

error: