ಮೈಸೂರು

ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1057ನೇ ಜಯಂತಿ ಮಹೋತ್ಸವ

ಸುತ್ತೂರು ಮಠದ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1057ನೇ ಜಯಂತಿ ಮಹೋತ್ಸವ ಸುತ್ತೂರಿನಲ್ಲಿ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ಜಯಂತ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆಗೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ಚಾಲನೆ ನೀಡಿದರು.

ಬಳಿಕ ಮಠದಿಂದ ಹೊರಟ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಉತ್ಸವಮೂರ್ತಿಯ ಮೆರವಣಿಗೆ, ನಂದಿ ಧ್ವಜ, ವೀರಗಾಸೆ, ಮಂಗಳವಾದ್ಯ, ಕೊಂಬು-ಕಹಳೆ, ಶಾಲಾ ಬ್ಯಾಂಡ್‍ಗಳು, ವೀರ ಮಕ್ಕಳ ಕುಣಿತ, ಜನಪದ ಕಲಾ ತಂಡಗಳು ಮತ್ತು ಶ್ರೀ ಮಠದ ಬಿರುದು ಬಾವಲಿಗಳ ಸಹಿತ ಸುತ್ತೂರಿನ ಪ್ರಮುಖ ಬೀದಿಗಳಲ್ಲಿ ಸಾಗಿತು. ಜೆಎಸ್‍ಎಸ್‍ ಲಲಿತಕಲಾ ತಂಡದವರು ವಚನಗಾಯನ ನಡೆಸಿಕೊಟ್ಟರು. ಗಾಯಕಿ ಇಂದ್ರಾಣಿ ಅನಂತ ರಾಮು ಮತ್ತು ತಂಡದವರ ಭಕ್ತಿಸುಧೆ ಕಾರ್ಯಕ್ರಮ ನಡೆಯಿತು.

ಶರಣು ದಿನಚರಿ ಬಿಡುಗಡೆ: ಶರಣು ವಿಶ್ವವಚನ ಫೌಂಡೇಶನ್ ಹೊರತಂದಿರುವ ಶರಣು ದಿನಚರಿಯನ್ನು ಸುತ್ತೂರು ಮಠದಲ್ಲಿ ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿ, ದಿನಚರಿಯ ಮುಖಾಂತರವೂ ಸಂಸ್ಕಾರ ರೂಢಿಸಬಹುದು ಎಂಬುದನ್ನು ಶರಣು ದಿನಚರಿ ತೋರಿಸಿದೆ. ವಚನಗಳನ್ನು ಆಂಗ್ಲ ಭಾಷೆಗೆ ಅನುವಾದ ಮಾಡಿ ಇತರ ರಾಜ್ಯ ಮತ್ತು ದೇಶಗಳು ಕೂಡ ವಚನ ಮೌಲ್ಯಗಳನ್ನು ಅರಿತು ರಾಜ್ಯದ ಸಂಸ್ಕೃತಿಯ ಬಗ್ಗೆ ಇತರರು ಕೂಡ ಗೌರವ ನೀಡಲು ಸಹಾಯಕವಾಗಿದೆ ಎಂದರು.

ಸುತ್ತೂರು ಶ್ರೀಗಳು ಮಾತನಾಡಿ, ವಚನ ಎಂದರೆ ಪ್ರಮಾಣ. ನಾವಾಡುವ ಮಾತುಗಳು ಪ್ರಮಾಣದ ರೀತಿ ಇರಬೇಕೆಂದರ್ಥ. ವಿಶ್ವ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದು ಇದೇ ವಚನ ಸಾಹಿತ್ಯ. ಅದಕ್ಕಾಗಿಯೇ ರಾಜೇಂದ್ರ ಶ್ರೀಗಳು ಶರಣ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿ ಮನೆಮನೆಗೆ ವಚನ ತಲುಪಲು ಕಾರಣೀಭೂತರಾದರು. ಆ ನಿಟ್ಟಿನಲ್ಲಿ ಶರಣು ವಿಶ್ವವಚನ ಫೌಂಢೇಶನ್ ಕೂಡ ಸಾಗುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು.

ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್, ಸಂಸದ ಧ್ರುವ ನಾರಾಯಣ್, ಮೈಸೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಶಿವಣ್ಣ, ಚಾಮರಾಜನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರೊ. ಮಲಲಿಕಾರ್ಜುನಪ್ಪ, ಮಾಜಿ ಸಚಿವರಾದ ಎಚ್.ವಿಶ್ವನಾಥ್, ಎಸ್.ಎ. ರಾಮದಾಸ್, ಸಿ.ಎಚ್. ವಿಜಯಶಂಕರ್, ಶರಣು ವಿಶ್ವವಚನ ಫೌಂಢೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ಶಾಸಕರಾಧ ವಾಸು, ಎಂ.ಕೆ. ಸೋಮಶೇಖರ್, ನರೇಂದ್ರಸ್ವಾಮಿ ಮತ್ತು ನೂರಕ್ಕೂ ಹೆಚ್ಚು ವಿವಿಧ ಮಠಾಧೀಶರು ಉಪಸ್ಥಿತರಿದ್ದರು.

Leave a Reply

comments

Related Articles

error: