ಪ್ರಮುಖ ಸುದ್ದಿ

ಗುಹ್ಯ ಶ್ರೀಅಗಸ್ತೇಶ್ವರ ದೇವಾಲಯಕ್ಕೆ ತಡೆಗೋಡೆ ನಿರ್ಮಾಣ : ಸಹಕಾರಕ್ಕೆ ಮನವಿ

ರಾಜ್ಯ(ಮಡಿಕೇರಿ) ಅ.7 :- ಕಾವೇರಿ ನದಿ ದಡದಲ್ಲಿರುವ ಗುಹ್ಯ ಶ್ರೀಅಗಸ್ತೇಶ್ವರ ಮಹಾದೇವರ ದೇವಾಲಯವನ್ನು ಸಂರಕ್ಷಿಸುವ ದೃಷ್ಟಿಯಿಂದ ಕೆಳಭಾಗದಲ್ಲಿ ತಡೆಗೋಡೆ ನಿರ್ಮಿಸುವ ಉದ್ದೇಶ ಹೊಂದಲಾಗಿದ್ದು, ಭಕ್ತಾಧಿಗಳು ಸಹಕರಿಸಬೇಕು ಎಂದು ದೇವಾಲಯದ ಆಡಳಿತ ಮಂಡಳಿ ಹಾಗೂ ಟ್ರಸ್ಟ್ ಮನವಿ ಮಾಡಿದೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ದೇವಾಲಯ ಟ್ರಸ್ಟ್‍ನ ಅಧ್ಯಕ್ಷ ರಾಮಚಂದ್ರರಾವ್, ಗುಹ್ಯ ಶ್ರೀ ಅಗಸ್ತೇಶ್ವರ ಮಹಾದೇವರ ದೇವಸ್ಥಾನ ಪುರಾಣ ಪ್ರಸಿದ್ಧವಾಗಿದೆ. ದೇವಾಲಯ ಕಾವೇರಿ ನದಿ ದಡದಿಂದ ಕೇವಲ ನಲವತ್ತು ಅಡಿ ಎತ್ತರದಲ್ಲಿದ್ದು, ಅಪರೂಪದ ಈ ಪುಣ್ಯ ಕ್ಷೇತ್ರವನ್ನು ಉಳಿಸಿಕೊಳ್ಳುವ ಪ್ರಯತ್ನ ನಮ್ಮದಾಗಿದೆ ಎಂದರು.
ನ್ಯಾಯಾಲಯದ ಆದೇಶವಿದ್ದರೂ ಈ ಭಾಗದಲ್ಲಿ ಮರಳು ಗಣಿಗಾರಿಕೆ ಯಾವುದೇ ಆತಂಕವಿಲ್ಲದೆ ನಡೆಯುತ್ತಿದೆ. ಇದರಿಂದಾಗಿ ದೇವಸ್ಥಾನದ ಉತ್ತರ ಭಾಗದಲ್ಲಿ ಬರೆ ಜರಿಯುತ್ತಿದೆ. ನೀರು ಕಲುಷಿತಗೊಂಡಿದ್ದು, ಬಟ್ಟೆ ಒಗೆಯಲು ಕೂಡ ಸಾಧ್ಯವಾಗದ ಪರಿಸ್ಥಿತಿ ಇದೆ. ಮಾಂಸದ ತ್ಯಾಜ್ಯಗಳು, ಪ್ಲಾಸ್ಟಿಕ್‍ಗಳು ನದಿ ದಡದಲ್ಲಿ ಬಂದು ಶೇಖರಣೆಯಾಗುತ್ತಿದ್ದು, ಇದೇ ಕಾರಣದಿಂದ ಮಳೆಗಾಲದಲ್ಲಿ ದೇವಾಲಯಕ್ಕೆ ಹಾನಿಯಾಗುವ ಅಪಾಯವಿದೆ. ಪ್ರವಾಹದಿಂದ ದೇವಾಲಯದ ಅಸ್ತಿತ್ವಕ್ಕೇ ದಕ್ಕೆಯಾಗುವ ಸಾಧ್ಯತೆಗಳಿದ್ದು, ತಡೆಗೋಡೆ ನಿರ್ಮಾಣ ಅನಿವಾರ್ಯವಾಗಿದೆ. ಕಾಮಗಾರಿ ಆರಂಭಿಸಲು ನಿರ್ಧರಿಸಲಾಗಿದ್ದು, ಭಕ್ತರ ಸಹಕಾರವನ್ನು ನಿರೀಕ್ಷಿಸುತ್ತಿರುವುದಾಗಿ ರಾಮಚಂದ್ರರಾವ್ ತಿಳಿಸಿದರು.
ಸುಮಾರು 200 ಅಡಿಗಳ ತಡೆಗೋಡೆ ನಿರ್ಮಿಸಲು ಒಂದು ಕೋಟಿ ಮೂವತ್ತೈದು ಲಕ್ಷ ರೂ.ಗಳ ಅವಶ್ಯಕತೆಯಿದ್ದು, ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಪಿ.ಕಾಳಪ್ಪ, ಎಂ.ರಮೇಶ್ ಹಾಗೂ ಪಿ. ಅಶೋಕ್ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: