ಕರ್ನಾಟಕಪ್ರಮುಖ ಸುದ್ದಿ

ನಾನಿರುವ ಪ್ರಪಂಚ ಚೆನ್ನಾಗಿದ್ದರೆ ಮಾತ್ರ ನಾನು ಚೆನ್ನಾಗಿರುತ್ತೇನೆ: ಪ್ರಕಾಶ್ ರೈ

ಅಂಕಣಗಳ ಬರಹ 'ಅವರವರ ಭಾವಕ್ಕೆ' ಕೃತಿ ಲೋಕಾರ್ಪಣೆ

ಮೈಸೂರು (ಅ.8): “ನಾನು ಚೆನ್ನಾಗಿದ್ದರೆ ನನ್ನ ಪ್ರಪಂಚ ಚೆನ್ನಾಗಿರುತ್ತದೆ ಎಂದುಕೊಳ್ಳುತ್ತಿದ್ದೆ. ಆದರೆ ನಾನಿರುವ ಪ್ರಪಂಚ ಚೆನ್ನಾಗಿದ್ದರೆ ಮಾತ್ರ ನಾನು ಚೆನ್ನಾಗಿರುತ್ತೇನೆ ಎಂದು ಅರ್ಥ ಮಾಡಿಕೊಂಡಿದ್ದೇನೆ’ ಎಂದು ಬಹುಭಾಷಾ ನಟ ಪ್ರಕಾಶ್ ರೈ ಅವರು ಹೇಳಿದ್ದಾರೆ.

ಆ ಸಾಲುಗಳ ಆಶಯ ಸಾಕಾರಗೊಳಿಸುವ ಚರ್ಚೆಯ ಮೂಲಕ ಖ್ಯಾತ ನಟ ಪ್ರಕಾಶ್ ರೈ ಅವರ ಅಂಕಣಗಳ ಬರಹ ‘ಅವರವರ ಭಾವಕ್ಕೆ’ ಕೃತಿ ಲೋಕಾರ್ಪಣೆಗೊಂಡಿತು. ನೆಲೆ ಹಿನ್ನೆಲೆ, ಜನಮನ ಮೈಸೂರು ಮತ್ತು ಸಾವನ್ನಾ ಪ್ರಕಾಶನದ ಸಹಯೋಗದಲ್ಲಿ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕೃತಿ ಬಿಡುಗಡೆ ಕಾರ್ಯಕ್ರಮವು ಸಮಾಜ ಕಟ್ಟುವ ಚಿಂತನೆಯನ್ನು ಬಿತ್ತುವ ಮೂಲಕ ವಿಶಿಷ್ಟವಾಗಿ ನಡೆಯಿತು.

ಸಾಹಿತಿ ಪ್ರೊ.ಸಿ.ನಾಗಣ್ಣ, ರಂಗಕರ್ಮಿ ಕೆ.ಆರ್.ಸುಮತಿ, ಮಂಡ್ಯ ರಮೇಶ್ ಅವರವರ ಭಾವಕ್ಕೆ ಕೃತಿಯಲ್ಲಿನ ಒಂದೊಂದು ಅಂಕಣ ಓದುವ ಮೂಲಕ ಪ್ರಕಾಶ್ ರೈ ನಟರಾಗಿಯೂ ಅವರಲ್ಲಿರುವ ಮಾನವೀಯ ಅಂತಃಕರಣದ ಹಲವು ಮುಖಗಳನ್ನು ಪರಿಚಯಿಸಿದ್ದಾರೆ ಎಂದರು. ಪ್ರಕಾಶ್ ರೈ ಅವರ ಅಭಿಮಾನಿಗಳು, ಚಿಂತಕರು, ವಿಚಾರವಂತರಿಂದ ಭರ್ತಿಯಾಗಿದ್ದ ಸಭಾಂಗಣವು ಪ್ರಕಾಶ್ ರೈ ಕಲಾವಿದರಾಗಿ ಅವರಿಗಿರುವ ಮಾನವೀಯ ತುಡಿತಕ್ಕೆ ಸಹಮತ ವ್ಯಕ್ತಪಡಿಸಿದರು.

ವಿಮರ್ಶಕ ಪ್ರೊ.ಓ.ಎಲ್.ನಾಗಭೂಷಣ ಸ್ವಾಮಿ ಅವರು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರಿಗೆ ಕೃತಿ ಹಸ್ತಾಂತರಿಸಿ ಮಾತನಾಡಿ, ಜೀವನ ಪ್ರವಾಸವಾಗಿರದೆ ಪ್ರಯಾಣವಾಗಿರಬೇಕೆಂಬ ಮಾತಿನಂತೆ ಪ್ರಕಾಶ್ ರೈ ನಡೆದುಕೊಳ್ಳುತ್ತಿದ್ದಾರೆ. ಇಮೇಜ್ ಇರುವ ವ್ಯಕ್ತಿಗಳು ಬದುಕನ್ನು ಹೇಗೆ ನೋಡಿದ್ದಾರೆ ಎಂಬುದನ್ನು ಈ ಪುಸ್ತಕದಲ್ಲಿ ತಿಳಿಯಬಹುದು ಎಂದರು.

ನಟ ಪ್ರಕಾಶ್ ರೈ ಮಾತನಾಡಿ, ಬರವಣಿಗೆ ಕೆಲಸ ನನ್ನ ಮರು ಹುಟ್ಟಾಯಿತು. ಸಂಕೋಲೆಗಳಿಂದ ಬಿಡಿಸಿಕೊಂಡು ಹೊರಬಂದು ಸ್ವಾತಂತ್ರ್ಯ ಗಳಿಸಿಕೊಂಡ ಗಳಿಗೆ ಇದು ಎಂದರು. ಗೆಳೆಯರಾದ ಕಟ್ಟೆ ಗುರುರಾಜ್, ಜೋಗಿ ಅಂತಹವರು ಬರೆಯಲು ಪ್ರೋತ್ಸಾಹಿಸಿದರು. ಎತ್ತರದಲ್ಲಿದ್ದವರು ಬರೆದಾಗ ನೆನಪು, ಅನುಭವ ಬರವಣಿಗೆಯಲ್ಲಿ ಮೂಡುತ್ತದೆ ಎನ್ನುವುದಕ್ಕಿಂತ ನಾನು ಜಾತ್ರೆಯನ್ನು ಅಪ್ಪನ ಹೆಗಲ ಮೇಲೆ ಕುಳಿತು ನೋಡುವ ಮಗುವಿನ ರೀತಿ ಬರೆಯುತ್ತಿದ್ದೇನೆ. ಆಗಲೇ ಲಂಕೇಶ್, ತೇಜಸ್ವಿ, ಚಿತ್ತಾಲರ ಒಡನಾಟ, ನೆನಪುಗಳು ಬರವಣಿಗೆಗೆ ಇಳಿದವು. ನನ್ನೊಂದಿಗೆ ಶ್ರೀಮಂತಿಕೆ ಕನ್ನಡ ಸಾಹಿತ್ಯ, ರಂಗಭೂಮಿ ಅನುಭವ, ಸಿನೆಮಾ ಹೀಗೆ ಅನೇಕ ಗ್ರಹಿಕೆ, ಅಂತಃಕರಣ ಸುತ್ತಲ ವಾತಾವರಣ ನಿರ್ಮಿಸಿಕೊಟ್ಟಿತು ಎಂದರು. (ಎನ್.ಬಿ)

Leave a Reply

comments

Related Articles

error: