ಪ್ರಮುಖ ಸುದ್ದಿ

ಉಪಚುನಾವಣೆಯ ನೇತೃತ್ವ ಯಾರಿಗೆ ? ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ

ರಾಜ್ಯ(ಬೆಂಗಳೂರು), ಅ.8:- ರಾಜ್ಯದ ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಿಗೆ ಎದುರಾಗಿರುವ ಉಪಚುನಾವಣೆಯ ನೇತೃತ್ವವನ್ನು ಯಾರು ವಹಿಸಬೇಕು ಎನ್ನುವುದು ಕಾಂಗ್ರೆಸ್ ಪಕ್ಷದಲ್ಲಿ ಗೊಂದಲದ ಗೂಡಾಗಿ ಪರಿಣಮಿಸಿದೆ.

ಸಾಮಾನ್ಯವಾಗಿ ಯಾವುದೇ ಚುನಾವಣೆ ಎದುರಾದರೂ, ಅದರ ನೇತೃತ್ವವನ್ನು ಪಕ್ಷದ ಅಧ್ಯಕ್ಷರಾಗಿದ್ದವರು ವಹಿಸಿಕೊಳ್ಳುವುದು ಸಾಮಾನ್ಯ. ಆದರೆ ಕಾಂಗ್ರೆಸ್‌ನಲ್ಲಿ ಈಗ ನಾಯಕತ್ವದ ವಿಷಯವೇ ಗೊಂದಲದ ಗೂಡಾಗಿದ್ದು, ಹಲವು ನಾಯಕರು ನಾಯಕತ್ವ ವಹಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಉಪಚುನಾವಣೆಯ ನೇತೃತ್ವ ವಹಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಅದಕ್ಕೆ ಕಾರಣ ಚುನಾವಣೆಗೆ ಸಂಪನ್ಮೂಲ ಕ್ರೋಢೀಕರಿಸುವುದು ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಮೀನಾಮೇಷ ಎಣಿಸಲು ಕಾರಣ ಎನ್ನಲಾಗಿದೆ.

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ತಮ್ಮ ಕೆಲಸದಲ್ಲಿ ತಾವು ಬಿಜಿಯಾಗಿದ್ದು, ಈ ಬಗ್ಗೆ ಯಾವುದೇ ತಲೆಕೆಡಿಸಿಕೊಳ್ಳುತ್ತಿಲ್ಲ. ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನನ್ನಲ್ಲಿ ಅಧಿಕಾರವಿಲ್ಲ, ನಾನೇನು ಮಾಡಲಿ ಎಂದು ತಮ್ಮ ಅಸಹಾಯಕತೆಯನ್ನು ಹೊರಹಾಕಿದ್ದಾರೆ.

ಉಪಚುನಾವಣೆ ಎದುರಿಸಲು ಹಣ ಇಲ್ಲ. ಹೀಗಾಗಿ ಯಾರನ್ನು ಕೇಳುವುದು, ಯಾರನ್ನು ಬಿಡುವುದು ಎಂದು ಪಕ್ಷದ ಅಧ್ಯಕ್ಷ ದಿನೇಶ್ ಗುಂಡೂರಾವ್, ಪರಮೇಶ್ವರ್ ಅವರ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸಚಿವ ಡಿ.ಕೆ. ಶಿವಕುಮಾರ್, ಆದಾಯ ತೆರಿಗೆ ದಾಳಿಯಿಂದ ನಾನೇ ಕಂಗಾಲಾಗಿದ್ದೇನೆ. ಹಣ ಹೊಂದಿಸುವುದು ಕಷ್ಟವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಸರ್ಕಾರದ ಮಟ್ಟದಲ್ಲಿ ಏನೂ ಆಗುತ್ತಿಲ್ಲ. ಸಚಿವರು ನಮ್ಮ ಕೆಲಸವಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಇನ್ನೆಲ್ಲಿ ದುಡ್ಡು ತರುವುದು ಎಂದು ತಮ್ಮ ಸಂಕಷ್ಟವನ್ನು ಹೊರಹಾಕಿದ್ದಾರೆ.

ಹೀಗಾಗಿ ಕಾಂಗ್ರೆಸ್‌ನಲ್ಲಿ ಹಣದ ಸಮಸ್ಯೆ ಎದುರಾಗಿದ್ದು, ನಾಯಕತ್ವ ವಹಿಸಿಕೊಳ್ಳಲು ನಾಯಕರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಬಳ್ಳಾರಿ, ಮಂಡ್ಯ, ಶಿವಮೊಗ್ಗ ಲೋಕಸಭೆ ಹಾಗೂ ರಾಮನಗರ, ಜಮಖಂಡಿ ವಿಧಾನಸಭೆಗಳ ಉಪಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: