ಮೈಸೂರು

ಮೋದಿ ಸುಳ್ಳುಗಾರ : ಮಾಜಿ ಸಂಸದ ಹೆಚ್.ವಿಶ್ವನಾಥ ಆರೋಪ

ದೇಶದಲ್ಲಿ ಮೋದಿಗಿಂತ ಸುಳ್ಳುಗಾರ ಬೇರೊಬ್ಬರಿಲ್ಲ. ಬಿಜೆಪಿಯವರಿಗಿಂತ ಕಳ್ಳ ಮನಸ್ಸು ಇನ್ಯಾರಿಗಿದೆ ಎಂದು ಮಾಜಿ ಸಂಸದ ಹೆಚ್. ವಿಶ್ವನಾಥ್ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಹೆಚ್.ವಿಶ್ವನಾಥ್, ಕಾರ್ಯಕ್ರಮಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದರು. ನೋಟ್ ಸಮಸ್ಯೆ ಇನ್ನೂ ಬಗೆಹರಿದಿಲ್ಲ, ಬಗೆಹರಿಯುವುದೂ ಇಲ್ಲ. ಇದು ಇನ್ನು 50 ತಿಂಗಳು ಕಳೆದರೂ ಸಹಜ ಸ್ಥಿತಿಗೆ ಬರಲ್ಲ ಎಂದು ಭವಿಷ್ಯ ನುಡಿದರು. ಜನಸಾಮಾನ್ಯರಿಗೆ ಇದರಿಂದ ತುಂಬಾ ತೊಂದರೆಯಾಗುತ್ತಿದೆ. ನೋಟ್ ಬ್ಯಾನ್ ಸಮಸ್ಯೆ ಕುರಿತು ಮಾತನಾಡುವವರಿಗೆ ದೇಶದ್ರೋಹದ ಪಟ್ಟ ಕಟ್ಟಲಾಗುತ್ತದೆ. ಪ್ರಧಾನಿ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು, ವಿಪಕ್ಷದವರ ಮೇಲೆಯೇ ತನಿಖಾ ದಾಳಿಗಳನ್ನು ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿ ಇಂದಿಗೂ ದಲಿತ ಹಾಗೂ ಅಲ್ಪಸಂಖ್ಯಾತರಿಗೆ ಅನ್’ಟಚಬಲ್ ಆಗಿದೆ. ದಲಿತರಿಗೆ, ಶೋಷಿತ ವರ್ಗದವರಿಗೆ ಬಿಜೆಪಿ ತೆರೆದ ಬಾಗಿಲು ಎನ್ನುತ್ತದೆ. ಆದರೆ ಅದು ಅವರಿಗೆ ಯಾವತ್ತೂ ಮುಚ್ಚಿದ ಬಾಗಿಲು ಎಂದು ತಿಳಿಸಿದರು.

ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಬಿಜೆಪಿ ಸೇರುವ ಕುರಿತು ಉತ್ತರಿಸಿದ ಅವರು, ಯಾರು ಯಾವ ಪಕ್ಷವನ್ನಾದರೂ ಸೇರಬಹುದು, ಆ ಸ್ವಾತಂತ್ರ್ಯ ಅವರಿಗಿದೆ ಎಂದು ತಿಳಿಸಿದರು.

ಈ ಸಂದರ್ಭ ಕಾಂಗ್ರೆಸ್ ನ ಕೆಲವು ಮುಖಂಡರು ವಿಶ್ವನಾಥ್ ಜೊತೆಗಿದ್ದರು.

Leave a Reply

comments

Related Articles

error: